ದೇಶದಲ್ಲಿ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ವಂಚನೆಗಳನ್ನು ನಿಯಂತ್ರಿಸಲು ವಾಟ್ಸಾಪ್ ಸಂಸ್ಥೆಗೆ ಮಹತ್ವದ ನಿರ್ದೇಶನಗಳನ್ನು ನೀಡಿರುವ ಕೇಂದ್ರ ಗೃಹ ಸಚಿವಾಲಯವು ವಂಚನೆ ಪ್ರಕರಣಗಳಲ್ಲಿ ಬಳಕೆಯಾಗುವ ಮೊಬೈಲ್ ಡಿವೈಸ್ ಐಡಿಗಳನ್ನು ಶಾಶ್ವತವಾಗಿ ನಿರ್ಬಂಧಿಸುವಂತೆ ಸೂಚಿಸಿದೆ.
ವಂಚಕ ಅಥವಾ ವಂಚಕರ ಜಾಲವನ್ನು ಗುರುತಿಸಿದ ತಕ್ಷಣ, ಮೊಬೈಲ್‌ನ ಡಿವೈಸ್ ಐಡಿಯನ್ನು ಬ್ಲಾಕ್ ಮಾಡಬೇಕು, ಆಗ ವಂಚಕರು ಅದೇ ಮೊಬೈಲ್ ಬಳಸಿ ಮತ್ತೊಂದು ಅಕೌಂಟ್ ತೆರೆಯಲು ಸಾಧ್ಯವಾಗುವುದಿಲ್ಲ. ಐಟಿ ನಿಯಮಗಳ ಪ್ರಕಾರ, ಡಿಲಿಟ್ ಆದ ಅಕೌಂಟ್‌ಗಳ ಮಾಹಿತಿಯನ್ನು ಕನಿಷ್ಠ 180 ದಿನ ಉಳಿಸಿಕೊಳ್ಳಬೇಕು. ಇದು ತನಿಖಾ ಸಂಸ್ಥೆಗಳಿಗೆ ಪುರಾವೆ ಸಂಗ್ರಹಿಸಲು ನೆರವಾಗಲಿದೆ.
ವಾಟ್ಸಾಪ್ ಅಕೌಂಟ್‌ಗಳನ್ನು ಸಕ್ರಿಯ ಮೊಬೈಲ್ ಸಿಮ್‌ಗೆ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಅನಾಮಧೇಯವಾಗಿ ವಾಟ್ಸಾಪ್ ಬಳಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದ್ದು, 4 ರಿಂದ 6 ತಿಂಗಳಲ್ಲಿ ಇದು ಜಾರಿಯಾಗಲಿದೆ.
ಪೊಲೀಸ್ ಅಥವಾ ಸಿಬಿಐ ಲೋಗೋಗಳನ್ನು ಪ್ರೊಫೈಲ್ ಪಿಕ್ಚರ್ ಆಗಿ ಬಳಸಿ ಜನರನ್ನು ಹೆದರಿಸುವ ವಂಚಕರನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ಬಳಸಲಾಗುವುದು. ನಕಲಿ ಪ್ರೊಫೈಲ್‌ಗಳನ್ನು ತಕ್ಷಣ ಡಿಲಿಟ್ ಮಾಡಲು ವಾಟ್ಸಾಪ್ ಒಪ್ಪಿಕೊಂಡಿದೆ. ಮ್ಯಾಲಿಶಿಯಸ್ ಎಪಿಕೆ ಫೈಲ್‌ಗಳ ವರ್ಗಾವಣೆಯನ್ನು ಪತ್ತೆಹಚ್ಚಿ ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಬಲಪಡಿಸಲು ಸೂಚಿಸಲಾಗಿದೆ.
2024ರಲ್ಲಿ ಭಾರತದಲ್ಲಿ 1.23 ಲಕ್ಷ ಡಿಜಿಟಲ್ ಅರೆಸ್ಟ್ ಪ್ರಕರಣಗಳು ವರದಿಯಾಗಿದ್ದು, ಜನರಿಂದ 1,935 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ಡಿಜಿಟಲ್ ವಂಚನೆಗಳಿಂದ ದೇಶಕ್ಕೆ 3,000 ಕೋಟಿ ರೂಪಾಯಿ ನಷ್ಟ ಅಂದಾಜಿಸಲಾಗಿದೆ.


