ಜಮ್ಮು ಕಾಶ್ಮೀರದ ಪಹಲ್ಗಾಂ ನಲ್ಲಿ ನಡೆದ ಉಗ್ರರ ದಾಳಿಗೆ ಭದ್ರತಾ ಲೋಪ ಕಾರಣ ಎಂದು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆಯಲ್ಲಿ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಪಹಲ್ಗಾವ್ ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಗುರುವಾರ ಕರೆದಿದ್ದ ಸರ್ವ ಪಕ್ಷ ಸಭೆಯಲ್ಲಿ ಕೇಂದ್ರ ಸಚಿವರೊಬ್ಬರು ಯಾವುದೇ ಘಟನೆ ನಡೆಯದೇ ಇದ್ದರೆ ನಾವು ಇಲ್ಲಿ ಸಭೆ ಸೇರುತ್ತಿರಲಿಲ್ಲ. ಭದ್ರತಾ ಲೋಪ ಆಗಿರುವುದು ನಿಜ. ಆದ್ದರಿಂದ ಸರ್ವಪಕ್ಷಗಳ ಸಭೆ ಕರೆದು ಸಲಹೆ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಜಮ್ಮು ಕಾಶ್ಮೀರದಲ್ಲಿ ಎಲ್ಲಿ ಭದ್ರತಾ ಸಿಬ್ಬಂದಿ ಇದ್ದರು, ಕೇಂದ್ರ ಮೀಸಲು ಪಡೆಯ ಸಿಬ್ಬಂದಿ ಎಲ್ಲಿವೆ ಎಂದು ಪ್ರಶ್ನಿಸಿವೆ.
ಜೂನ್ ನಲ್ಲಿ ನಡೆಯುವ ಅಮರನಾಥ ಯಾತ್ರೆ ವರೆಗೂ ಜಮ್ಮು ಕಾಶ್ಮೀರದಲ್ಲಿ ಭದ್ರತಾ ನಿಯಮಗಳು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಆದರೆ ಅನಂತ್ ನಾಗ್ ಜಿಲ್ಲೆಗೆ ಏಕಾಏಕಿ ಭದ್ರತಾ ಸಿಬ್ಬಂದಿಯಿಂದ ಸ್ಥಳಾಂತರಿಸುವಾಗ ಹಿರಿಯ ಅಧಿಕಾರಿಗಳು ಗಮನಕ್ಕೆ ತಂದಿಲ್ಲ ಎಂದು ಕೇಂದ್ರ ವಿವರಣೆ ನೀಡಿದೆ.
ಪ್ರವಾಸಿಗರು ಪರ್ವತ ಶ್ರೇಣಿಗಳ ನಡುವೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ನಡೆದುಕೊಂಡು ಬೆಟ್ಟ ಹತ್ತುವ ಪರಿಸ್ಥಿತಿ ಇದ್ದಿದ್ದರಿಂದ ಭದ್ರತಾ ಸಂಖ್ಯೆ ಕೂಡ ಕಡಿಮೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ರಕ್ಷಣೆಗೆ ಕೂಡಲೇ ಧಾವಿಸುವುದು ಕೂಡ ಸಾಧ್ಯವಾಗಲಿಲ್ಲ ಎಂದು ಪ್ರತಿಪಕ್ಷಗಳಿಗೆ ವಿವರಣೆ ನೀಡಲಾಗಿದೆ.
ಕೇಂದ್ರ ಸಚಿವ ಕಿರಣ್ ರಿಜಿಜು ಸಭೆಯ ನಂತರ ಮಾತನಾಡಿ , ಸಭೆಯಲ್ಲಿ ಪ್ರತಿಪಕ್ಷಗಳು ಘಟನೆಯನ್ನು ಖಂಡಿಸಿ ಒಗ್ಗಟ್ಟು ಪ್ರದರ್ಶಿಸಿದವು. ಕೇಂದ್ರ ಯಾವುದೇ ತೀರ್ಮಾನ ಕೈಗೊಂಡರೂ ಬೆಂಬಲ ನೀಡುವುದಾಗಿ ತಿಳಿಸಿವೆ ಎಂದು ಹೇಳಿದರು.