ನವದೆಹಲಿ: ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳನ್ನು ಮತ್ತಷ್ಟು ಮಾರಾಟ ಮಾಡಲು ಸರ್ಕಾರ ಮುಂದಾಗಿದ್ದು, ಹೂಡಿಕೆ ಹಿಂತೆಗೆತ ಇಲಾಖೆಯು ವಹಿವಾಟಿನ ಸೂಕ್ಷ್ಮ ವಿವರಗಳನ್ನು ರೂಪಿಸಲಿದೆ ಎಂದು ಮೂಲಗಳು ತಿಳಿಸಿವೆ.
ಎಲ್‌ಐಸಿಯಲ್ಲಿ ಪ್ರಸ್ತುತ ಸರ್ಕಾರ ಶೇ.96.5ರಷ್ಟು ಪಾಲನ್ನು ಹೊಂದಿದೆ. ಇದು ಮೇ 2022 ರಲ್ಲಿ ಪ್ರತಿ ಷೇರಿಗೆ ರೂ.902-949 ಬೆಲೆಯಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ ಮೂಲಕ ಶೇ.3.5 ರಷ್ಟು ಪಾಲನ್ನು ಮಾರಾಟ ಮಾಡಿತ್ತು.
ಈ ಷೇರು ಮಾರಾಟದಿಂದ ಸರ್ಕಾರಕ್ಕೆ ಸುಮಾರು 21,000 ಕೋಟಿ ರೂ. ಆದಾಯ ಬಂದಿತ್ತು. ಇದೀಗ ಮತ್ತಷ್ಟು ಷೇರು ಮಾರಾಟಕ್ಕೆ ಸರ್ಕಾರ ಅನುಮೋದನೆ ನೀಡಿದೆ ಮತ್ತು ಚರ್ಚೆಗಳು ಇನ್ನೂ ಆರಂಭಿಕ ಹಂತದಲ್ಲಿವೆ ಎಂದು ಮೂಲಗಳು ತಿಳಿಸಿವೆ.
`ಮಾರುಕಟ್ಟೆ ಸ್ಥಿತಿಯನ್ನು ನೋಡಿ ಷೇರು ಮಾರಾಟವನ್ನು ತೀರ್ಮಾನಿಸುವುದು ಹೂಡಿಕೆ ಹಿಂತೆಗೆತ ಇಲಾಖೆಯ ಜವಾಬ್ದಾರಿಯಾಗಿದೆ” ಎಂದು ಮೂಲಗಳು ತಿಳಿಸಿವೆ.
ಮೇ 16, 2027 ರೊಳಗೆ ಕಡ್ಡಾಯವಾದ 10 ಪ್ರತಿಶತ ಸಾರ್ವಜನಿಕ ಷೇರುದಾರರ ಅಗತ್ಯವನ್ನು ಪೂರೈಸಲು ಸರ್ಕಾರವು ಸಾರ್ವಜನಿಕ ವಲಯದ ಜೀವ ವಿಮಾ ಸಂಸ್ಥೆಯಲ್ಲಿ ಇನ್ನೂ 6.5 ಪ್ರತಿಶತ ಪಾಲನ್ನು ಬಿಡುಗಡೆ ಮಾಡಬೇಕಾಗಿದೆ.
ಷೇರು ಮಾರಾಟದ ಪ್ರಮಾಣ, ಬೆಲೆ, ಮತ್ತು ಸಮಯವನ್ನು ಸರಿಯಾದ ಸಮಯದಲ್ಲಿ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಎಲ್‌ಐಸಿಯ ಪ್ರಸ್ತುತ ಮಾರುಕಟ್ಟೆ ಬಂಡವಾಳೀಕರಣವು 5.85 ಲಕ್ಷ ಕೋಟಿ ರೂ.ಗಳಷ್ಟಿದೆ.
ಎಲ್‌ಐಸಿ ಷೇರುಗಳು ತಲಾ 924.40 ರೂ.ಗಳಲ್ಲಿ ವಹಿವಾಟು ನಡೆಸುತ್ತಿದ್ದು, ಬಿಎಸ್‌ಇಯಲ್ಲಿ ಹಿಂದಿನ ಮುಕ್ತಾಯಕ್ಕಿಂತ ಶೇ. 2.27 ರಷ್ಟು ಕಡಿಮೆಯಾಗಿದೆ.