ಈ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯವರಿಗೆ ಸಿಸಿಬಿ ಆಘಾತ ನೀಡಿದೆ. ಪ್ರಕರಣಕ್ಕೆ ಸಂಬಂಧಿ ಸಿದಂತೆ ನಟಿ ಸಂಜನಾ ಮತ್ತು ರಾಗಿಣಿ ವಿರುದ್ಧದ ಎಫ್‌ಐಆರ್ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ಡ್ರಗ್ಸ್ ಕೇಸಲ್ಲಿ ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ನಟಿಯರು ಅರ್ಜಿ ಸಲ್ಲಿಸಿದ್ದರು. ನಟಿ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಹಾಗೂ ವೀರೇನ್ ಖನ್ನಾ ವಿರುದ್ಧದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದು ಮಾಡಿತ್ತು.
ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯ ಸಮ್ಮತಿ ಬಳಿಕ ಸುಪ್ರೀಂ ಕೋರ್ಟ್‌ಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಹೈಕೋರ್ಟ್ ಆದೇಶ ರದ್ದುಗೊಳಿಸುವಂತೆ ಸಿಸಿಬಿ ಮೇಲ್ಮನವಿ ಅರ್ಜಿಯಲ್ಲಿ ಕೋರಿದೆ. ಸಿಸಿಬಿ ಮನವಿಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ಆದರೆ ಸ್ಯಾಂಡಲ್‌ವುಡ್ ನಟಿಯರಾದ ಸಂಜನಾ ಹಾಗೂ ರಾಗಿಣಿಗೆ ಮತ್ತೆ ಸಂಕಷ್ಟ ಶುರುವಾಗಲಿದೆ.
2020ರಲ್ಲಿ ರಾಗಿಣಿ ಬಂಧನವಾಗಿತ್ತು. ಡ್ರಗ್ಸ್ ಸುಳಿಯಲ್ಲಿ ಸಿಲುಕಿದ್ದ ರಾಗಿಣಿ ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ಇತ್ತೀಚೆಗಷ್ಟೆ ಈ ಪ್ರಕರಣ ಇತ್ಯಾರ್ಥವಾಗಿ ರಾಗಿಣಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಗದ ಬೆನ್ನಲ್ಲೆ ಈ ಪ್ರಕರಣದಲ್ಲಿ ರಾಗಿಣಿ ನಿರಪರಾಧಿ ಎಂದು ತೀರ್ಪು ಬಂದಿತ್ತು.
2020 ಸೆಪ್ಟೆಂಬರ್ 8ರಂದು ನಟಿ ಸಂಜನಾ ಗಲ್ರಾನಿ ಅವರನ್ನು ಸಿಸಿಬಿ ಬಂಧಿಸಿಗಿತ್ತು. ನಾಲ್ಕು ತಿಂಗಳು ಜೈಲುವಾಸ ಅನುಭವಿಸಿದ್ದರು. ಬಳಿಕ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಸಂಜನಾ ತಮ್ಮ ಮೇಲಿನ ಪ್ರಕರಣ ರದ್ದು ಮಾಡುವಂತೆ ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಸಂಜನಾ ಮೇಲಿರುವ ಎಫ್‌ಐಆರ್ ಅನ್ನು ರದ್ದುಗೊಳಿಸಿತ್ತು.