ಹಣದ ಬಂಡಲ್ ನ ಹಾಸಿಗೆ, ಐಷಾರಾಮಿ ಕಾರುಗಳು, ದುಬಾರಿ ವಾಚ್ ಗಳು, ಕೆಜಿಗಟ್ಟಲೆ ಚಿನ್ನ.. ಇದು ಡಿಐಜಿ ಎಂದು ಹೇಳಿಕೊಂಡು ಭ್ರಷ್ಟಾಚಾರ ನಡೆಸುತ್ತಿದ್ದ ಐಪಿಎಸ್ ಅಧಿಕಾರಿ ಮನೆಯಲ್ಲಿ ಪತ್ತೆಯಾಗಿದೆ.
ಪಂಜಾಬ್ ನ ರೂಪರ್ ರೇಂಜ್ ನಲ್ಲಿರುವ ಐಪಿಎಸ್ ಅಧಿಕಾರಿ ಹರಿಚರಣ್ ಸಿಂಗ್ ಬುಲ್ಲರ್ ಮನೆಗೆ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಅಕ್ರಮ ಸಂಪತ್ತು ಕಂಡು ದಂಗಾಗಿದ್ದಾರೆ.
೨೦೦೯ರ ಐಪಿಎಸ್ ಬ್ಯಾಚ್ ಹರಿಚರಣ್ ಸಿಂಗ್ ಬುಲ್ಲರ್ ಮತ್ತೊಂದು ಖಾಸಗಿಯಾಗಿ ಕೃಷ್ಣ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದು, ಈ ಹೆಸರಿನಲ್ಲೂ ಮಧ್ಯವರ್ತಿಯಾಗಿಯೂ ಹಣದ ವ್ಯವಹಾರ ನಡೆಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಸ್ಥಳೀಯ ಉದ್ಯಮಿ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಇತ್ಯರ್ಥಗೊಳಿಸಲು ಲಂಚ ಸ್ವೀಕರಿಸುವ ಆರೋಪದ ಮೇಲೆ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇದಲ್ಲದೇ ಪ್ರತಿ ತಿಂಗಳು ಲಂಚದ ರೂಪದಲ್ಲಿ ಹಣ ಸ್ವೀಕರಿಸುತ್ತಿದ್ದ ಎಂಬುದು ತಿಳಿದು ಬಂದಿದೆ.
ಪಂಜಾಬ್ ನ ಫತೇಹ್ ಗಢ ಸಾಹೇಬ್ ನ ಆಕ್ಷ್ ಭಟಿಯಾ ಎಂಬ ಗುಜರಿ ವ್ಯಾಪಾರಿ ೫ ದಿನಗಳ ಹಿಂದೆ ಸಿಬಿಐಗೆ ದೂರು ನೀಡಿದ್ದು, ಗುರುವಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. ಹರಿಚರಣ್ ಕ್ರಿಮಿನಲ್ ಕೇಸ್ ನಿಂದ ಮುಕ್ತಿ ಹೊಂದಲು ಕೃಷ್ಣ ಎಂಬ ಮಧ್ಯವರ್ತಿಯಿಂದ ಮಾಸಿಕ ಹಣ ನೀಡುವಂತೆ ಸೂಚಿಸಿದ್ದ. ಆದರೆ ವಾಸ್ತವವಾಗಿ ಕೃಷ್ಣನೇ ಹರಿಚರಣ್ ಆಗಿದ್ದ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಲಂಚದ ಹಣ ಬರಲಿಲ್ಲ. ಅದನ್ನು ಕೃಷ್ಣನಿಗೆ ನೀಡುವಂತೆ ಸೂಚಿಸಿದ್ದರು.
ದೂರು ನೀಡಿದ ವ್ಯಕ್ತಿಯಿಂದ 8 ಲಕ್ಷ ರೂ. ಲಂಚ ಸ್ವೀಕರಿಸುವಾಗ ಐಪಿಎಸ್ ಅಧಿಕಾರಿ ಹರಿಚರಣ್ ಸಿಂಗ್ ರೆಡ್ ಹ್ಯಾಂಡಾಗಿ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ. ಈತ ಡಿಜಿಐ ಎಂಬ ಹೆಸರಿನಿಂದಲೂ ಬ್ಲಾಕ್ ಮೇಲ್ ಮಾಡಿ ಹಣ ಸಂಪಾದಿಸುತ್ತಿರುವುದು ಬೆಳಕಿಗೆ ಬಂದಿದೆ.
ಚಂಡೀಗಢ, ಮೊಹಾಲಿ, ಬುಲ್ಲರ್ ಸೇರಿದಂತೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿದ ಸಿಬಿಐ, ಹಾಸಿಗೆ ಹಾಸುವಷ್ಟು ಪ್ರಮಾಣದ ನೋಟುಗಳ ಕಂತೆ ಸಿಕ್ಕಿದ್ದು, ಇದರ ಮೌಲ್ಯ 5 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 1.5 ಕೆಜಿ ಚಿನ್ನ, 22 ದುಬಾರಿ ಬೆಲೆಯ ವಾಚ್ ಗಳು, ಹಲವಾರು ಐಷಾರಾಮಿ ಕಾರುಗಳು, ದುಬಾರಿ ವಿದೇಶೀ ಮದ್ಯಗಳು ಅಲ್ಲದೇ ಹಲವು ಅಕ್ರಮವಾಗಿ ಸಂಪಾದಿಸಿದ್ದ ಆಸ್ತಿಯ ದಾಖಲೆ ಪತ್ರಗಳನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಮತ್ತೊಂದು ಸ್ಥಳದಲ್ಲಿ 21 ಲಕ್ಷ ರೂ. ನಗದು ಪತ್ತೆಯಾಗಿದೆ.
ಹರಿಚರಣ್ ಸಿಂಗ್ ಪೊಲೀಸ್ ಅಧಿಕಾರಿಯಾಗಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಪಟಿಯಾಲಾದ ಡಿಐಜಿಯಾಗಿ, ಗುಪ್ತಚರ ಇಲಾಖೆ, ಮೊಹಾಲಿಯ ಸೂಪರಿಟೆಂಡೆಂಟ್ ಅಲ್ಲದೇ ಹಲವು ನಗರಗಳಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದಾರೆ.
ಶಿರೊಮಣಿ ಅಕಾಲಿದಳ ಮುಖಂಡ ಬಿಕ್ರಂ ಸಿಂಗ್ ಮಜಿತಿಯಾ ವಿರುದ್ಧದ ಡ್ರಗ್ಸ್ ಪ್ರಕರಣ ತನಿಖೆಯಲ್ಲೂ ಹರಿಚರಣ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು.