ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ, ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ಇಲಾಖಾ ತನಿಖೆಗೆ ಸೂಚಿಸಿ ಮುಖ್ಯ ಕಾರ್ಯದರ್ಶಿ ನೀಡಿದ್ದ ನೋಟಿಸ್‌ಗೆ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (CAT) ತಡೆ ನೀಡಿದೆ. 2019ರ ಆಡಿಯೋ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಸಿಬಿಐ ನಿರ್ಣಾಯಕವಾಗಿ ದೃಢಪಡಿಸಿದೆ ಎಂದು ಅಲೋಕ್ ಕುಮಾರ್ ವಾದಿಸಿದ್ದಾರೆ.
ಮಾಹಿತಿ ಹಕ್ಕು ಕಾಯಿದೆಯಡಿ ರಾಜ್ಯ ಸರ್ಕಾರವು 2024 ರ ಮೇ 6 ರಂದು ನೀಡಿದ ಉತ್ತರದ ಪ್ರಕಾರ, ಇಲಾಖಾ ತನಿಖೆಯನ್ನು ಈಗಾಗಲೇ ಕೈಬಿಡಲಾಗಿದೆ. ಸಿಬಿಐ ಕೂಡ ಈ ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಸಲ್ಲಿಸಿದೆ. ಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಲು ಇಲಾಖಾ ಬಡ್ತಿ ಸಮಿತಿ ತನ್ನ ಹೆಸರನ್ನು ಅಂತಿಮಗೊಳಿಸಬೇಕಾ ಗಿದ್ದ ಕೆಲವು ದಿನಗಳ ಮೊದಲು 1969ರ ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮ 8(4)ರ ಅಡಿಯಲ್ಲಿ 2025ರ ಮೇ 9ರಂದು ಅಧಿಸೂಚನೆ ಹೊರಡಿಸಲಾಗಿದೆ. ಡಿಜಿ ಮತ್ತು ಐಜಿಪಿ ಹುದ್ದೆಗೆ ಪರಿಗಣಿಸಲು ಕೇಂದ್ರ ಲೋಕಸೇವಾ ಆಯೋಗಕ್ಕೆ ರವಾನಿಸಲು ಏಪ್ರಿಲ್ 23, 2025 ರಂದು ನನ್ನ ವಿವರಗಳನ್ನು ತೆಗೆದುಕೊಂಡ ನಂತರ ಈ ನೋಟಿಸ್ ನೀಡಲಾಗಿದೆ ಎಂದು ಅಲೋಕ್ ಕುಮಾರ್ ಆರೋಪಿಸಿದ್ದಾರೆ.
ಇದೇ ಆರೋಪದಡಿ ಹಿಂದೆ ಇಲಾಖಾ ವಿಚಾರಣೆಯನ್ನು ಆರಂಭಿಸಿ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ. ಮೇ 21ರಿಂದ ಅನ್ವಯವಾಗುವಂತೆ ಅವರಿಗೆ ಮುಂಬಡ್ತಿ ನೀಡಬೇಕಾಗಿತ್ತು. ಇದಕ್ಕೆ ತಡೆ ಉಂಟು ಮಾಡುವ ದುರುದ್ದೇಶದಿಂದ ನೋಟಿಸ್ ನೀಡಲಾಗಿದೆ ಎಂದು ಅಲೋಕ್ ಕುಮಾರ್ ಪರ ವಕೀಲರು ಸಿಎಟಿ ಮುಂದೆ ವಾದ ಮಂಡಿಸಿದ್ದಾರೆ.
ವಿಭಾಗೀಯ ಪೀಠ ಈ ವಿಚಾರವನ್ನು ಆಲಿಸಬೇಕು ಎಂದ ಸಿಎಟಿ ನ್ಯಾಯಾಂಗ ಸದಸ್ಯ ಬಿ.ಕೆ.ಶ್ರೀವಾಸ್ತವ ಅವರು, ಮುಂದಿನ ವಿಚಾರಣೆ ನಡೆಯುವ ಜೂನ್ 10 ರವರೆಗೆ ಅಧಿಸೂಚನೆಯನ್ನು ತಡೆಹಿಡಿಯಲಾಗಿದೆ ಎಂದು ಆದೇಶಿಸಿದರು.