Menu

ಜಾತಿಗಳ ನಡುವೆ ಕಂದಕ ತರಲು ಜಾತಿ ಸಮೀಕ್ಷೆ: ಆರ್.ಅಶೋಕ

ಸಿಎಂ ಸಿದ್ದರಾಮಯ್ಯ ಜಾತಿಗಳ ನಡುವೆ ಕಂದಕ ತರಲು ಗಣತಿ ಮಾಡಿಸಿದ್ದಾರೆ. ಈಗ ಹೊಸ ಗಣತಿ ಮಾಡಿಸುತ್ತಾರೆಂದರೆ ಈ ಹಿಂದಿನ ಗಣತಿ ಬೋಗಸ್ ಎಂದರ್ಥ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು.

ಸುದ್ದಿಗಾರರೊರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ಸರ್ಕಾರ ಕಾಟಾಚಾರಕ್ಕೆ ಜಾತಿ ಒಳಮೀಸಲು ಸಮೀಕ್ಷೆ ಮಾಡಿದೆ. ಈ ಹಿಂದಿನ ಜಾತಿ ಗಣತಿ ಬಿಡುಗಡೆಗೆ ಹತ್ತು ವರ್ಷವಾಗಿದೆ. ಆದರೆ ಈಗ ಮಾಡಿದ ಒಳಮೀಸಲು ಸಮೀಕ್ಷೆ ಕೇವಲ 15 ದಿನಗಳಲ್ಲಿ ಮುಗಿದಿದೆ. ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಗೆ ಎಲ್ಲ ಕಡೆ ಮಾನ್ಯತೆ ಇದೆ. ಆದರೆ ರಾಜ್ಯ ಸರ್ಕಾರ ಮಾಡುವ ಸಮೀಕ್ಷೆಗೆ ಬೆಲೆ ಇಲ್ಲ. ಜಾತಿಗಳ ನಡುವೆ ಕಂದಕ ತಂದು ಬೇಳೆ ಬೇಯಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಈ ಹುನ್ನಾರ ಮಾಡಿದ್ದಾರೆ ಎಂದರು‌.

ಕಾಂಗ್ರೆಸ್ ಸರ್ಕಾರ ಮರಳಿ ಜಾತಿ ಗಣತಿ ಮಾಡಲಿದೆ ಎಂದರೆ ಈ ಹಿಂದಿನ ಗಣತಿ ಬೋಗಸ್ ಎಂದರ್ಥ. ಇದರಿಂದಾಗಿ ಸರ್ಕಾರಕ್ಕೆ ಮುಖಭಂಗವಾಗಿದೆ. ಕೇಂದ್ರ ಸರ್ಕಾರ ನಡೆಸುವ ಗಣತಿಗೆ ರಾಜ್ಯ ಸರ್ಕಾರ ಸಹಕಾರ ನೀಡಿದರೆ ಸಾಕು. ರಾಜ್ಯ ಸರ್ಕಾರ ಎಲ್ಲರಿಗೂ ಮಾರ್ಗದರ್ಶನ ನೀಡಬೇಕು. ಆದರೆ ಇದೇ ಸರ್ಕಾರದ ಪಕ್ಷದ ನಾಯಕರು ಸಂಸತ್ತಿನಲ್ಲಿ ಎಲ್ಲದಕ್ಕೂ ಸಭಾತ್ಯಾಗ ಮಾಡುತ್ತಾರೆ‌. ಸಂಸತ್ತಿನಲ್ಲಿ ರಾಜ್ಯದ ವಿಷಯವನ್ನು ಚರ್ಚೆ ಮಾಡಬೇಕು. ನಮ್ಮ ಪಕ್ಷದ ಎಲ್ಲ ಸಂಸದರು ರಾಜ್ಯದ ನೆಲ, ಜಲ ವಿಚಾರವಾಗಿ ಮಾತಾಡುತ್ತಾರೆ ಎಂದು ಹೇಳಿದರು.

ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿರುವುದು ಸ್ವಾಗತಾರ್ಹ. ಶಾಸಕರ ಮನೆ ಸುಟ್ಟಿರುವ ಘಟನೆ ಇನ್ನೂ ಕಣ್ಣ ಮುಂದಿದೆ. ಪಿಎಫ್ ಐ ಸೇರಿದಂತೆ ಪಾಕಿಸ್ತಾನದ ಪರವಾಗಿರುವವರು ಅನೇಕರು ಇದರಲ್ಲಿ ಭಾಗಿಯಾಗಿದ್ದರು. ಅವರೆಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ನಾನು ಸಾರಿಗೆ ಸಚಿವನಾಗಿದ್ದಾಗ, ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಿದ್ದೆ. ಈಗ ಕೂಡ ಸರ್ಕಾರ ಅವರ ಅಹವಾಲು ಆಲಿಸಬೇಕು. ನಾನು ಕೂಡ ಅದಕ್ಕೆ ಸ್ಪಂದಿಸುತ್ತೇನೆ‌. ಆಂಧ್ರಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆಯಾಗಿರುವುದು ಖಂಡನೀಯ. ಇಲ್ಲಿನ ಸರ್ಕಾರ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ‌ ನೀಡುವಂತೆ ಸಲಹೆ, ಸೂಚನೆ ಕೊಡಬೇಕು. ಸ್ಮಾರ್ಟ್ ಮೀಟರ್ ಖರೀದಿಯಲ್ಲಿ ಕಾಂಗ್ರೆಸ್ ಲೂಟಿ ಮಾಡುತ್ತಿದೆ. ಇದರ ತನಿಖೆಯಾಗಿ ಸತ್ಯ ಹೊರಬರಲಿ. ಇದರಲ್ಲಿ ಜನರಿಗೆ ನ್ಯಾಯ ಸಿಗಲು ಹೋರಾಟ ಮಾಡುತ್ತೇವೆ ಎಂದರು.

Related Posts

Leave a Reply

Your email address will not be published. Required fields are marked *