ರಾಜ್ಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವಿರೋಧಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಸಿಜೆ ವಿಭು ಬಖ್ರು, ನ್ಯಾ.ಸಿ.ಎಂ.ಜೋಶಿ ನೇತೃತ್ವದ ಪೀಠದಲ್ಲಿ ನಡೆಯಿತು. ಅರ್ಜಿದಾರರು ಮತ್ತು ಸರ್ಕಾರದ ಪರ ವಕೀಲರ ವಾದ ಮತ್ತು ಪ್ರತಿವಾದ ಆಲಿಸಿದ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆಯನ್ನ ನಾಳೆಗೆ ( ಸೆಪ್ಟಂಬರ್ 24 ) ಮುಂದೂಡಿದೆ.
ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಸರ್ವೆ ಅಧಿಕಾರವಿಲ್ಲ.ಎಲ್ಲರೂ ಆಧಾರ್, ಮೊಬೈಲ್ ನಂಬರ್ ಕೊಡಬೇಕೆಂದು ಸೂಚಿಸಲಾಗಿದೆ. ಯಾವುದೇ ಕಾನೂನಿನ ಬಲವಿಲ್ಲದೇ ಸರ್ವೆ ನಡೆಸುತ್ತಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಪ್ರಭುಲಿಂಗ್ ಕೆ.ನಾವದಗಿ ವಾದಿಸಿದರು.
ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ತಮ್ಮ ವಾದವನ್ನು ಮಂಡಿಸಿ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅರ್ಜಿದಾರರು ಜಾತಿ ಸಮೀಕ್ಷೆ ಎಂದು ವ್ಯಾಖ್ಯಾನಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದರು.
ಆಗ ಪೀಠವು “ಪ್ರತಿಯೊಬ್ಬ ನಿವಾಸಿಯನ್ನು ಪತ್ತೆ ಮಾಡಿ, ಅವರ ಜಾತಿಯನ್ನು ಗುರುತಿಸಲಾಗುತ್ತಿದೆ ಎಂಬುದು ಅರ್ಜಿದಾರರ ವಾದವಾಗಿದೆ. ವ್ಯತ್ಯಾಸವೇನು” ಎಂದು ಪ್ರಶ್ನಿಸಿತು. ಅದಕ್ಕೆ ಸಿಂಘ್ವಿ ಅವರು “ದತ್ತಾಂಶವಿಲ್ಲದೇ ಕಲ್ಯಾಣ ಕ್ರಮಗಳನ್ನು ರೂಪಿಸಲಾಗದು. ಇದು ನ್ಯಾಯಾಂಗ ಪರಿಶೀಲನೆಗೆ ಒಳಪಡುವುದಿಲ್ಲ. ವಿಶೇಷ ಪ್ರಕರಣಗಳಲ್ಲಿ ಮಾತ್ರ ನ್ಯಾಯಾಲಯ ಮಧ್ಯಂತರ ತಡೆ ನೀಡಬಹುದಾಗಿದೆ”, ಎಂದರು.
ಈ ಹಂತದಲ್ಲಿ ಹಿಂದುಳಿದ ವರ್ಗಗಳ ಆಯೋಗ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಸಮೀಕ್ಷೆಯಲ್ಲಿ ದತ್ತಾಂಶ ನೀಡುವುದು ಸ್ವಯಂಪ್ರೇರಿತ ನಿರ್ಧಾರವಾಗಿದ್ದು, ಕಡ್ಡಾಯವಾಗಿ ಮಾಹಿತಿ ನೀಡಲೇಬೇಕಾದ ಗಣತಿ ಕಾಯಿದೆಗೆ ವಿರುದ್ಧ” ಎಂದಿದ್ದಾರೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.