Menu

ಜಾತ್ಯತೀತ ವ್ಯವಸ್ಥೆಯಲ್ಲಿ ಜಾತಿಗಣತಿ: ಹಲವು ಸಂದೇಹಗಳಿಗೆ ಉತ್ತರ ಬೇಕಿದೆ

ಈಗ ಮಾಧ್ಯಮದಲ್ಲಿ ಹರಿದಾಡುವ ಅಂಕೆ ಸಂಖ್ಯೆಗಳು ಮತ್ತು ಇತರ ಮಾಹಿತಿಗಳು ಸೋರಿಕೆಯಾದ ವರದಿಯಿಂದ ಹೊರಬಂದಿದ್ದು, ಇದರ ಮೇಲೆ ಅಭಿಪ್ರಾಯ ವನ್ನು ಮಾಡಲಾಗದು. ಒಂದು ದೃಢವಾದ ಅಭಿಪ್ರಾಯವನ್ನು ರೂಪಿಸಬೇಕಿದ್ದರೆ ಅಧಿಕೃತ ವರದಿಗಾಗಿ ಸ್ವಲ್ಪದಿನ ಕಾಯಲೇಬೇಕು. ಸದ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ವರದಿಯು ಯಥಾರೀತಿ ಜಾರಿಯಾಗುವ ಲಕ್ಷಣ ಕಾಣುತ್ತಿಲ್ಲ. ಇದರ ಬಗೆಗೆ ಅಂತಿಮ ನಿರ್ಣಯ ತೆಗೆದು ಕೊಳ್ಳಲು ವರ್ಷಗಳೇ ಬೇಕಾಗಬಹುದು.

ಭಾರತಕ್ಕೂ ವಿಭಜನೆಗೂ ಅವಿನಾಭಾವ ಸಂಬಂಧ ಇದೆ ಎನ್ನುವುದು ಹಳೆಯ ಮಾತು. ಯಾವ ಮುಹೂರ್ತದಲ್ಲಿ ಅಖಂಡ ಭಾರತವನ್ನು ವಿಭಜಿಸಿ ಭಾರತ -ಪಾಕಿಸ್ತಾನ ಎನ್ನುವ ಎರಡು ರಾಷ್ಟ್ರಗಳು ಉದಯವಾದವೋ, ಈ ವಿಭಜನೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. ಕೆಲವು ಹೊರಗಡೆ ಗೋಚರವಾದರೆ, ಕೆಲವು ಅಗೋಚರವಾಗಿ ಇದ್ದು, ಗೋಚರವಾಗಿ ಕಾಣದೇ ಕೊರೆಯುತ್ತಲೇ ಇರುತ್ತವೆ. ಉತ್ತರ ದಕ್ಷಿಣ, ಆ ಭಾಷೆ-ಈ ಭಾಷೆ, ಆ ಧರ್ಮ-ಈ ಧರ್ಮ, ಮೂಲ ನಿವಾಸಿಗಳು- ವಲಸಿಗರು, ಉಳ್ಳವರು- ಇಲ್ಲದವರು, ವಿದ್ಯಾವಂತರು-ಅಶಿಕ್ಷಿತರು, ಮುಂದುಳಿದವರು – ಹಿಂದುಳಿದವರು, ಮೇಲ್ವರ್ಗ- ಕೆಳವರ್ಗದವರು, ಶೋಷಿತರು- ಬಲಾಢ್ಯರು, ಉಚ್ಚವರ್ಗ-ಕೆಳವರ್ಗ, ಆ ಜಾತಿ-ಈ ಜಾತಿ, ಉಚ್ಚಜಾತಿ-ನೀಚ ಜಾತಿ ಹೀಗೆ ಹಲವು ರೀತಿಯಲ್ಲಿ ದೇಶ ವಿಭಜನೆಯಾಗಿದೆ.

ಈ ವಿಭಜನೆಗಳು ಅಧಿಕೃತವಾಗಿ ಗೆಜೆಟ್ ನೋಟಿಫಿಕೆಷನ್ ಮೂಲಕ ಆಗಿರದಿದ್ದರೂ ಬದುಕಿನ ಪ್ರತಿ ಸ್ತರದಲ್ಲಿ ಅದು ಕೈಯಾಡಿಸುತ್ತದೆ ಮತ್ತು ತನ್ನ ಅಸ್ತಿತ್ವವನ್ನು ತೋರಿಸುತ್ತದೆ. ಈ ವಿಭಜನೆಗಳಲ್ಲಿ ಈಗ ಜಾತಿ ಗಣತಿ ಮೂಲಕ ಜಾತಿ ವಿಭಜನೆ ಮೇಲ್ಮೆಗೆ ಬಂದಿದ್ದು ನಿರೀಕ್ಷೆಗಿಂತ ಹೆಚ್ಚು ಸುದ್ದಿ ಮತ್ತು ಸದ್ದನ್ನು ಮಾಡುತ್ತಿದೆ.
ಈ ದೇಶದಲ್ಲಿ ಜನಗಣತಿ ಬಹುಶಃ ಪ್ರತಿಯೊಬ್ಬರಿಗೂ ಗೊತ್ತು. ಹಾಗೆಯೇ ದನಗಣತಿ, ಶೈಕ್ಷಣಿಕ ಗಣತಿ, ಹುಲಿ ಗಣತಿ, ಆನೆ ಗಣತಿಗಳೂ ಗೊತ್ತು. ಬಹುತೇಕ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಇಂತಹ ಗಣತಿಗೆ ಬಳಸಿಕೊಳ್ಳುವುದು ತೀರಾ ಮಾಮೂಲು. ಆದರೆ, ಏಕೋ ಈ ಜಾತಿ ಗಣತಿ ನಡೆದಿರುವ ಬಗೆಗೆ ಒಮ್ಮತದ ಅಭಿಪ್ರಾಯ ಕೇಳುತ್ತಿಲ್ಲ. ನಮ್ಮ ಮನೆಗೆ ಬರಲಿಲ್ಲ, ನಮ್ಮ ಊರಿಗೆ ಬರಲಿಲ್ಲ, ನನ್ನನ್ನು ಕೇಳಲಿಲ್ಲ, ಯಾವಾಗ ಮಾಡಿದ್ದರು, ಯಾರು ಮಾಡಿದ್ದರು, ಗಣತಿಯಲ್ಲಿ ಏನೇನು ಕೇಳಿದ್ದರು ಶಿಕ್ಷಕರು ಬಂದಿದ್ದರೋ ಅಥವಾ ಶಾಲಾ ಮಕ್ಕಳು ಬಂದಿದ್ದರೋ, ನೆನಪಾಗುತ್ತಿಲ್ಲ, ಮುಂತಾದ ಸಂದೇಹಗಳು ದೊಡ್ಡ ಧ್ವನಿಯಲ್ಲಿ ಕೇಳುತ್ತಿವೆ. ೨೦೧೫ರಲ್ಲಿ ನಡೆದಿದೆ ಎಂದು ಹೇಳಲಾದ ಗಣತಿಯ ವಿವರಗಳನ್ನು ಇಷ್ಟು ದಿನ ಬಹಿರಂಗ ಪಡಿಸಲಿಲ್ಲವೇಕೆ? ೧೬೦ ಕೋಟಿ ರೂ. ವೆಚ್ಚದಲ್ಲಿ ನಡೆದಿದೆ ಎನ್ನಲಾದ ಗಣತಿಯನ್ನು ಹಲವರು ಪ್ರಶ್ನಿಸುತ್ತಿದ್ದಾರೆ. ಜಾತಿಗಣತಿ ನಡೆಸಲು ಇಷ್ಟು ಹಣವೇ ಎಂದು ಹಲವರು ಹುಬ್ಬೇರಿಸುತ್ತಿದ್ದಾರೆ.

ಈಗಾಗಲೇ ೧೦ ವರ್ಷಗಳಾಗಿದ್ದು ಆ ಅಂಕೆ- ಸಂಖ್ಯೆಗಳನ್ನು ಈಗ ತೆಗೆದುಕೊಳ್ಳಬಹುದೇ, ಪರಿಗಣಿಸಬಹುದೇ? ಈಗ ಈ ವರದಿಯನ್ನು ಜಾರಿ ಮಾಡುವ ಅವಶಕತೆ ಇದೆಯೇ? ಯಾಕಿಷ್ಟು ತರಾತುರಿ? ಖ್ಯಾತ ಹೃದ್ರೋಗ ತಜ್ಞ ಮತ್ತು ಸಂಸದ ಡಾ. ಮಂಜುನಾಥ ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿಗಣತಿಯ ಔಚಿತ್ಯ ವನ್ನೇ ಪ್ರಶ್ನಿಸಿದ್ದಾರೆ. ಇದನ್ನು ಹಲವರು ಬೆಂಬಲಿಸಿದ್ದಾರೆ ಕೂಡಾ. ಜಾತಿ ಗಣತಿ ಹೆಸರಿನಲ್ಲಿ ಹಿಂದುಗಳನ್ನು ಒಡೆಯಲಾಗಿದೆ. ೩೦೦ ಕ್ಕೂ ಹೆಚ್ಚು ಜಾತಿಗಳನ್ನು ಗುರುತಿಸಲಾಗಿದೆ. ಸಮೀಕ್ಷೆ ವೇಳೆಯಲ್ಲಿ ೭೩೦೦೦ ಕುಟುಂಬಗಳು ತಮ್ಮ ಜಾತಿಯ ಹೆಸರನ್ನೇ ಹೇಳಿಲ್ಲ. ಅಯ್ಯಂಗಾರಿಗಳ ಸಂಖ್ಯೆಗಿಂತ ಅಯ್ಯಂಗಾರಿ ಬೇಕರಿ ಗಳ ಸಂಖ್ಯೆ ಹೆಚ್ಚಿದೆಯಂತೆ. ಮುಸಲ್ಮಾನರ ಸಂಖ್ಯೆ ೭೫ ಲಕ್ಷವಂತೆ, ೪೨ ಲಕ್ಷ ಇರುವ ಬ್ರಾಹ್ಮಣರನ್ನು ೧೫ ಲಕ್ಷಕ್ಕೆ ಇಳಿಸಲಾಗಿದೆಯಂತೆ.. ಹೀಗೆ ಹಲವಾರು, ಆರೋಪಗಳು, ಲೇವಡಿಗಳು, ಗೊಂದಲಗಳು ಕೇಳಿ ಬರುತ್ತಿವೆ. ಲಿಂಗಾಯತ ಮತ್ತು ಒಕ್ಕಲಿಗರ ಸಂಖ್ಯೆಯ ಬಗೆಗೆ ಆಕ್ರೋಶ ಕಾಣುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ೨ ಲಕ್ಷ ಹವ್ಯಕರು ಸೇರಿದ್ದು, ಜನಗಣತಿ ವರದಿ ಹವ್ಯಕರ ಸಂಖ್ಯೆ ೮೫೦೦೦ ತೋರಿಸಿರುವುದು ೫ ಲಕ್ಷ ಹವ್ಯಕರಿಗೆ ಶಾಕ್ ಆಗಿದೆಯೆಂದು ಹವ್ಯಕರು ಬೇಸರಿಸಿದ್ದಾರೆ ಮತ್ತು ಆಕ್ರೋಶ ವ್ಯಕ್ತ ಮಾಡಿದ್ದಾರೆ. ಹಾಗೆಯೇ ೪೫ ಲಕ್ಷ ಇರುವ ಬ್ರಾಹ್ಮಣರ ಸಂಖ್ಯೆಯನ್ನು ೧೫ ಲಕ್ಷ ಕ್ಕೆ ಮಿತಿಗೊಳಿಸಿದ್ದು ಬ್ರಾಹ್ಮಣರನ್ನು ಚಕಿತಗೊಳಿಸಿದೆಯಂತೆ. ಇದು ಕೇವಲ ಸ್ಯಾಂಪಲ್ ಆಗಿದ್ದು ಇನ್ನೂ ಬಹಳಷ್ಟು ಅಚ್ಚರಿಗಳು ಇವೆಯಂತೆ. ಹಲವು ಸಮುದಾಯಗಳು ಸಭೆ ಸೇರಿ ತಮ್ಮ ವಿರೋಧವನ್ನು ವ್ಯಕ್ತ ಮಾಡುತ್ತಿವೆ ಮತ್ತು ಇನ್ನೂ ಕೆಲವು ಸಮುದಾಯಗಳು ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಮಾಡಬಹುದು. ಈ ವರದಿಯ ಬಗೆಗೆ ಅಲ್ಪಸಂಖ್ಯಾತರೂ ಸೇರಿ ಬಹುತೇಕರು ತೃಪ್ತಿ ಹೊಂದಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.

ಇವುಗಳ ಸತ್ಯಾಸತ್ಯತೆ ತಿಳಿಯದು. ವರದಿಯು ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಇದು ಸಚಿವರ ಕೈಸೇರಿದ್ದು ಅವರು ಅದನ್ನು ಓದುತ್ತಿದ್ದಾರಂತೆ. ಈಗ ಮಾಧ್ಯಮದಲ್ಲಿ ಹರಿದಾಡುವ ಅಂಕೆ ಸಂಖ್ಯೆಗಳು ಮತ್ತು ಇತರ ಮಾಹಿತಿಗಳು ಸೋರಿಕೆಯಾದ ವರದಿಯಿಂದ ಹೊರಬಂದಿದ್ದು, ಇದರ ಮೇಲೆ ಅಭಿಪ್ರಾಯವನ್ನು ಮಾಡಲಾಗದು. ಒಂದು ದೃಢವಾದ ಅಭಿಪ್ರಾಯವನ್ನು ರೂಪಿಸಬೇಕಿದ್ದರೆ ಅಧಿಕೃತ ವರದಿಗಾಗಿ ಸ್ವಲ್ಪದಿನ ಕಾಯಲೇಬೇಕು. ಸದ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ವರದಿಯು ಯಥಾರೀತಿ ಜಾರಿಯಾಗುವ ಲಕ್ಷಣ ಕಾಣುತ್ತಿಲ್ಲ. ಇದರ ಬಗೆಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲು ವರ್ಷಗಳೇ ಬೇಕಾಗಬಹುದು. ನಮ್ಮ ಆಡಳಿತ ಪದ್ಧತಿಯಲ್ಲಿ ಯಾವುದಾದರೂ ವಿವಾದಾತ್ಮಕ ವಿಷಯದ ನಿಟ್ಟಿನಲ್ಲಿ ನಿರ್ಣಯಿಲು ಸಾಧವಾಗದಿದ್ದರೆ ಸಮಿತಿಯನ್ನು ನೇಮಿಸು ತ್ತಾರೆ. ಆ ಸಮಿತಿಯ ಶಿಫಾರಸ್ಸುಗಳನ್ನು ಅಭ್ಯಸಿಸಿ ಸಲಹೆ ನೀಡಲು ಉಪಸಮಿತಿಯನ್ನು ನೇಮಿಸುತ್ತಾರೆ. ಅದೇ ಪ್ರಹಸನ ಈಗ ಕಾಣುತ್ತಿದೆ. ಇದಕ್ಕೆ ಮುಖ್ಯ ಕಾರಣ ಕೆಲವು ಬಲಾಢ್ಯ ಸಮುದಾಯಗಳು ಈ ವರದಿಯ ವಿರುದ್ಧ ತಿರುಗಿ ಬಿದ್ದಿರುವುದು ಮತ್ತು ಸರ್ಕಾರವನ್ನೇ ಉರುಳಿಸುವ ಎಚ್ಚರಿಕೆಯನ್ನು ನೀಡಿರುವುದು ಎನ್ನಲಾಗುತ್ತದೆ. ಬಲಾಢ್ಯ ಸಮುದಾಯಗಳನ್ನು ಎದುರು ಹಾಕಿಕೊಡು ಸರ್ಕಾರದ ತೇರನ್ನು ಎಳೆಯುವುದು ಕಷ್ಟ. ಹಾಗೆಯೇ ಹಿಂದುಳಿದವರನ್ನೂ ನಿರ್ಲಕ್ಷಿಸು ವಂತಿಲ್ಲ. ಅಂತೆಯೇ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲಾಗಿದೆ. ಈ ವರದಿ ಯಥಾರೀತಿ ಜಾರಿಯಾಗುವುದನ್ನು ರಾಜಕೀಯ ವಿಶ್ಲೇಷಕರು ಸಂದೇಹಿಸು ತ್ತಾರಾದರೆ ಸಿದ್ದರಾಮಯ್ಯನವರ ಲೆಕ್ಕಾಚಾರ ತಪ್ಪಿದಂತೆ ಕಾಣುತ್ತದೆ. ಪ್ರತಿಕ್ರಿಯೆ ಮತ್ತು ರಾಜಕೀಯ ಬೆಳವಣಿಗೆ ಅವರು ಅಂದುಕೊಂಡಂತೆ ಅಗದಿರುವುದು ಅವರಿಗೆ ಶಾಕ್ ಮುಟ್ಟಿಸಿದೆ ಎಂದು ಅವರ ವಿರೋಧಿಗಳು ಹೇಳುತ್ತಿದ್ದಾರೆ. ಸಂಕಷ್ಟದಲ್ಲಿ ಇರುವಾಗ ಅಂದಿನ ಪ್ರಧಾನಿ ವಿ .ಪಿ.ಸಿಂಗ್ ಮಂಡಲ್ ವರದಿಯನ್ನು ಜಾರಿಗೊಳಿಸಿ ತಮ್ಮ ಹುದ್ದೆಯನ್ನು ಭದ್ರಗೊಳಿಸಿಕೊಂಡಂತೆ ಸಿದ್ದರಾಮಯ್ಯನವರು ಜಾತಿ ಗಣತಿ ಕಾರ್ಡ್ ಬಿಟ್ಟಿದ್ದಾರೆ ಎಂದು ಅವರ ರಾಜಕೀಯ ವಿರೋಧಿಗಳು ಅಭಿಪ್ರಾಯಪಡುತ್ತಿದ್ದಾರೆ. ವರದಿ ಒಬಿಸಿ ಪರವಾಗಿದ್ದು, ಅವರ ಸಂಖ್ಯೆಯನ್ನು ೭೦%ಕ್ಕಿಂತ ಹೆಚ್ಚು ತೋರಿಸುವ ಪ್ರಯತ್ನವಾಗಿದೆ ಎಂದು ಕೆಲವರು ಅಪಾದಿ ಸುತ್ತಿದ್ದಾರೆ. ಹಾಗೆಯೇ ಒಬಿಸಿ ಖೋಟಾವನ್ನು ೩೨ ರಿಂದ ೫೧% ಗೆ ಏರಿಸುವ ಹುನ್ನಾರ ಇದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಇದರ ಸತ್ಯಾಸತ್ಯತೆ ತಿಳಿಯದು. ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಮೇಲುನೋಟಕ್ಕೆ ಕಾಣುವುದಕ್ಕಿಂತ ಇನ್ನೇನೋ ಒಳಗೆ ಹುದುಗಿಟ್ಟುಕೊಂಡಿರುವಂತೆ ಕಾಣುತ್ತದೆ ಎನ್ನಲಾಗುತ್ತದೆ.

ಈ ವರದಿಯ ಉದ್ದೇಶ  ಕೇವಲ ಅಂಕೆ ಸಂಖ್ಯೆಗಳ ಕ್ರೋಢೀಕರಣಕ್ಕೆ ಸೀಮಿತವಾಗಿದ್ದರೆ, ಅದು ಇಷ್ಟು ಸದ್ದು ಮಾಡುತ್ತಿರಲಿಲ್ಲ ಮತ್ತು ಧೂಳನ್ನೂ ಎಬ್ಬಿಸುತ್ತಿರಲಿಲ್ಲ. ಇದು ಮೀಸಲಾತಿ ಸಮೀಕರಣವನ್ನು ಅಲುಗಾಡಿಸುವ ಸಾಧತೆ ಹೆಚ್ಚಾಗಿದ್ದು, ಪ್ರತಿಯೊಂದು ಸಮುದಾಯವೂ ಬದಲಾದ ಸಮುದಾಯದ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿಗೆ ಒಳಪಡಲು ಮತ್ತು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಬೇಡಿಕೆ ಮಂಡಿಸುವುದನ್ನು ಅಲ್ಲಗೆಳೆಯಲಾಗದು. ಇರುವುದೊಂದು ಹೃದಯ ಯಾರಿಗಂತ ಕೊಡಲಿ ಎನ್ನುವಂತೆ ಮೀಸಲಾತಿ ೫೦% ಮಿತಿಯನ್ನು ಮೀರಬಾರದು ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸುತ್ತದೆ ಎನ್ನಲಾಗುತ್ತದೆ. ಮುಸ್ಲಿಂ ಜನಸಂಖ್ಯೆ ೭೫ ಲಕ್ಷ ತಲುಪಿದ್ದು ಅವರ ಮೀಸಲಾತಿಯನ್ನು ೪ % ನಿಂದ ೮% ಗೆ ಏರಿಸಬಹುದೆ? ಹೀಗೆ ಗೊಂದಲಕಾರಿ ವಿಶ್ಲೇಷಣೆಗಳು ಕೇಳಿ ಬರುತ್ತವೆ.

ಸಿದ್ದರಾಮಯ್ಯನವರು ಯಾವ ಉದ್ದೇಶದಿಂದ ಜಾತಿ ಗಣತಿ ವರದಿಯನ್ನು ಹೊರಹಾಕಲು ಪ್ರಯತ್ನಿಸಿದರೋ ತಿಳಿಯದು. ಈ ನಿಟ್ಟಿನಲ್ಲಿ ನಡೆಯುತ್ತಿರುವ ಬೆಳವಣಿಗೆ ಅವರ ನಿದ್ರೆಯನ್ನು ಕೆಡಿಸುತ್ತಿರುವುದು ಸತ್ಯ. ಅವರು ಅಹಿಂದ ಪರ ಮತ್ತು ಮೇಲ್ವರ್ಗದವರ ವಿರುದ್ಧ ಎನ್ನುವ ಟೀಕೆಗಳು ಬರುತ್ತಿರುವಾಗ, ಕಾಕ ತಾಳೀಯವಾಗಿ ಈ ವರದಿ ಅವರ ರಾಜಕೀಯ ನಿಲುವನ್ನು ಪ್ರತಿಬಿಂಬಿಸುವಾಗ ಅವರು ರಾಜಕೀಯ ವಾತಾವರಣ ತಿಳಿಯಾಗಿರುವಾಗ ಈ ವರದಿಗೆ ಮುಕ್ತಿ ಕೊಡಲು ಪ್ರಯತ್ನಿಸಬಹುದಿತ್ತು ಎನ್ನುವ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ವಾಲ್ಮೀಕಿ ಹಗರಣ, ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಪ್ರಕರಣ, ಮುಡಾ ಜಟಾಪಟಿ ಹೀಗೆ ಕೆಲವು ಪ್ರಕರಣಗಳು ಇನ್ನೂ ಸದ್ದು ಮಾಡುತ್ತಿರವಾಗ ಹತ್ತು ವರ್ಷ ವಿಳಂಬವಾದ ವರದಿಯನ್ನು ಇನ್ನೂ ಸ್ವಲ್ಪ ವಿಳಂಬವಾಗಿ ಬಿಡುಗಡೆ ಮಾಡಬಹುದಿತ್ತು ಎನ್ನಲಾಗುತ್ತದೆ. ಜಾತಿ ತುಂಬಾ ಸೂಕ್ಷ್ಮವಾದ ವಿಷಯ. ಹ್ಯಾಂಡ್ಲ್ ವಿತ್ ಕೇರ್ ಎನ್ನುವಂತೆ ಎಚ್ಚರಿಕೆಯಿಂದ ಹ್ಯಾಂಡ್ಲ್ ಮಾಡಬೇಕಾಗುತ್ತದೆ. ಹಾಗೆಯೇ ಮತ ಬ್ಯಾಂಕ್‌ಗೂ ನೇರ ಕೊಂಡಿ ಇರುತ್ತದೆ. ಸ್ವಲ್ಪ ಎಡವಿದರೂ ಹುದ್ದೆ ಕೈತಪ್ಪುತ್ತದೆ.

-ರಮಾನಂದ ಶರ್ಮಾ, ಲೇಖಕರು
ಮೊ: ೯೮೮೦೮೪೬೨೧೭

Related Posts

Leave a Reply

Your email address will not be published. Required fields are marked *