Friday, September 05, 2025
Menu

ಜಾತಿ ನಿಂದನೆ: ಮೇಲ್ನೋಟಕ್ಕೆ ಅಪರಾಧ ಸಾಬೀತಾಗದಿದ್ದರಷ್ಟೇ ನಿರೀಕ್ಷಣಾ ಜಾಮೀನು ಎಂದ ಸುಪ್ರೀಂ

ಜಾತಿ ನಿಂದನೆ ಅಥವಾ ಎಸ್​ಸಿ/ಎಸ್​ಟಿ ಕಾಯ್ದೆಯಡಿ ಮೇಲ್ನೋಟಕ್ಕೆ ಅಪರಾಧ ಸಾಬೀತು ಆಗದಿದ್ದರೆ ಮಾತ್ರ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮಹಾರಾಷ್ಟ್ರದ ಜಾತಿ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದ್ದ ಬಾಂಬೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ನ್ಯಾಯಪೀಠವು ಈ ಆದೇಶ ಪ್ರಕಟಿಸಿದೆ. ಆರೋಪಿ ಮತ್ತು ಇತರರು ದೂರುದಾರರನ್ನು “ಮಂಗ್ಟ್ಯಾನೋ” ಎಂಬ ಜಾತಿ ಹೆಸರಿನಲ್ಲಿ ನಿಂದಿಸಿ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ಮಾಡಿದ್ದರು ಎಂದು ಪ್ರಕರಣ ದಾಖಲಾಗಿತ್ತು.

ವಿಧಾನಸಭೆ ಚುನಾವಣೆಯಲ್ಲಿ ಆರೋಪಿ ಕಡೆಯ ಅಭ್ಯರ್ಥಿಯನ್ನು ಬೆಂಬಲಿಸಲು ನಿರಾಕರಿಸಿದಕ್ಕೆ ದೂರುದಾರರಿಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ, ಮನೆಯನ್ನು ಸುಟ್ಟುಹಾಕುವುದಾಗಿ ಆರೋಪಿ ಬೆದರಿಕೆ ಹಾಕಿದ್ದರು. ತಾಯಿ ಮತ್ತು ಚಿಕ್ಕಮ್ಮನ ಮೇಲೆ ಕೂಡ ದೌರ್ಜನ್ಯ ಎಸಗಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆರೋಪಿ ಬಳಸಿದ ನಿಂದನೀಯ ಪದಗಳು ಜಾತಿವಾದಿಯಾಗಿದ್ದು, ದೂರುದಾರರ ಜಾತಿ ಗುರುತಿನ ಕಾರಣದಿಂದಾಗಿ ಅವರನ್ನು ಅವಮಾನಿಸುವ ಉದ್ದೇಶವನ್ನು ಹೊಂದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ನ್ಯಾಯಪೀಠ ಹೇಳಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ, 1989ರ ಸೆಕ್ಷನ್ 18 ನಿರೀಕ್ಷಣಾ ಜಾಮೀನಿಗಾಗಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 438ರ ಬಳಕೆಯನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಆರೋಪಿ ಅಪರಾಧವನ್ನು ಮಾಡಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದರೆ ಮತ್ತು ಆರೋಪಗಳು ಪ್ರಾಥಮಿಕ ಅರ್ಹತೆಯನ್ನು ಹೊಂದಿಲ್ಲ ಎಂದು ಕಂಡುಬಂದರೆ ಮಾತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ವಿವೇಚನೆಯನ್ನು ಚಲಾಯಿಸಲು ಅವಕಾಶವಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

Related Posts

Leave a Reply

Your email address will not be published. Required fields are marked *