ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ ಮಾಡಿದ 100 ಮಂದಿಯ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ವೇಳೆ ವೃದ್ಧ ವಕೀಲ ಸನಾತನ ಧರ್ಮದ ಅವಹೇಳನ ಸಹಿಸುವುದಿಲ್ಲ ಎಂದು ಘೋಷಣೆ ಕೂಗಿ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ಪ್ರಕರಣದ ಬೆನ್ನಲ್ಲೇ ಜಾತಿ ನಿಂದನೆ ನಡೆಯುತ್ತಿವೆ.
ಬೌದ್ಧ ಧರ್ಮವನ್ನು ಅನುಸರಿಸುತ್ತಿರುವ ದಲಿತ ಸಮುದಾಯಕ್ಕೆ ಸೇರಿದ ಮಹಾರಾಷ್ಟ್ರ ಮೂಲದ ಬಿಆರ್ ಗವಾಯಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ ಕುರಿತು ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸರು 100ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾರ್ವಜನಿಕವಾಗಿ ನಿಂದನೆ, ಮಾನ ಹಾನಿ, ಜಾತಿ ನಿಂದನೆ ಮುಂತಾದ ಸೆಕ್ಷನ್ ಗಳಡಿ ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ ಮುಂತಾದ ಅಶ್ಲೀಕ ಕಮೆಂಟ್ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಂಜಾಬ್ ಪೊಲೀಸ್ ಇಲಾಖೆ ವಕ್ತಾರ ಹೇಳಿಕೆ ನೀಡಿದ್ದಾರೆ.
ಮಧ್ಯಪ್ರದೇಶದಲ್ಲಿರುವ 7 ಅಡಿ ಎತ್ತರದ ವಿಷ್ಣು ಮೂರ್ತಿಯ ತೆರವು ಕಾರ್ಯಾಚರಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಗವಾಯಿ ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ನೀವು ಅಷ್ಟೊಂದು ದೈವಭಕ್ತರು ಎಂದು ಹೇಳಿಕೊಳ್ಳುತ್ತಿರಲ್ಲಾ ದೇವರ ಬಳಿಯೇ ಈ ಸಮಸ್ಯೆಗೆ ಪರಿಹಾರ ಕೇಳಿ ಎಂದು ಹೇಳಿದ್ದರು. ಈ ಹೇಳಿಕೆಗೆ ವಕೀಲ ಅಸಮಾಧಾನ ವ್ಯಕ್ತಪಡಿಸಿ ಶೂ ಎಸೆದಿದ್ದರು.