ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ಬಾರ್‌ನಲ್ಲಿ ರಾತ್ರಿ ಮದ್ಯ ಸೇವನೆಗೆ ಹೋದ ವ್ಯಕ್ತಿ ಸೈಡ್ಸ್ ನೀಡುವುದಕ್ಕೆ ಬಾರ್ ಕ್ಯಾಷಿಯರ್ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದು, ಕೆಲಸ ಮುಗಿಸಿಕೊಂಡು ಮನೆಗೆ ಹೋದ ಕ್ಯಾಷಿಯರ್ ಮನೆಯೊಳಗೆ ಹೋಗಬೇಕು ಎನ್ನುವಷ್ಟರಲ್ಲಿ ಆತನ ಹೆಂಡತಿ-ಮಕ್ಕಳ ಕಣ್ಣೆದುರೇ ಚಾಕು ಇರಿದು ಕೊಲೆಗೈದು ಪರಾರಿಯಾಗಿದ್ದಾನೆ.
ಲಕ್ಕೂರು ಗ್ರಾಮದಲ್ಲಿರುವ ‘ಅಶೋಕ ವೈನ್ಸ್’ ಬಾರ್‌ನ ಕ್ಯಾಷಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕುಮಾರಸ್ವಾಮಿ (45) ಕೊಲೆಯಾದವರು. ಹಾಸನದ ಕುಮಾರಸ್ವಾಮಿ ಲಕ್ಕೂರು ಗ್ರಾಮದಲ್ಲಿ ನೆಲೆಸಿದ್ದರು.
ಆರೋಪಿ ಸುಭಾಶ್ (30) ಬಾರ್‌ಗೆ ಬಂದು ಮದ್ಯದ ಜೊತೆ ಮಿಕ್ಸ್‌ಚರ್ ಕೇಳಿದ್ದಾನೆ. ಬಾರ್ ಮುಚ್ಚುವ ಸಮಯವಾಗಿದ್ದರಿಂದಕ್ಯಾಷಿಯರ್ ಕುಮಾರಸ್ವಾಮಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸುಭಾಶ್ ಕಿರಿಕ್ ಮಾಡಿದ್ದು, ಮಾತಿನ ಚಕಮಕಿ ನಡೆದಿತ್ತು. ಬಳಿಕ ಬಾರ್ ಮುಚ್ಚಿ ಕುಮಾರಸ್ವಾಮಿ ಮನೆಗೆ ತೆರಳುತ್ತಿದ್ದಾಗ ಹೊಂಚು ಹಾಕಿದ್ದ ಆರೋಪಿ ಸುಭಾಶ್ ಹಿಂಬಾಲಿಸಿಕೊಂಡು ಹೋಗಿದ್ದಾನೆ. ಕುಮಾರಸ್ವಾಮಿ ಮನೆಯ ಮುಂದೆ ತಲುಪಿದ ತಕ್ಷಣ ಮಾರಣಾಂತಿಕವಾಗಿ ದಾಳಿ ಮಾಡಿದ್ದಾನೆ. ಚಾಕುವಿನಿಂದ ಕೊಲೆ ಮಾಡಿದ್ದಾನೆ. ಈ ಭೀಕರ ಘಟನೆ ಆತನ ಹೆಂಡತಿ ಮತ್ತು ಮಕ್ಕಳ ಎದುರೇ ನಡೆದಿದೆ.
ಕೊಲೆ ಮಾಡಿ ಆರೋಪಿ ಸುಭಾಶ್ ಸ್ಥಳದಿಂದ ಪರಾರಿಯಾಗಿದ್ದ. ಮಾಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಸಾರ್ವಜನಿಕರಿಂದ ಮಾಹಿತಿ ಹಾಗೂ ಲಭ್ಯವಿದ್ದ ಆಧಾರಗಳನ್ನು ಪರಿಶೀಲಿಸಿ ಹೊಸಕೋಟೆ ಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಆರೋಪಿ ಸುಭಾಶ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಮದ್ಯ ತೆಗೆದುಕೊಂಡ ನಂತರ 10 ರೂ. ಸೈಡ್ಸ್ ವಿಚಾರಕ್ಕೆ ಗಲಾಟೆ ನಡೆದಿದೆ. ಆರೋಪಿ ಕೈಲಿದ್ದ ಬಾಟಲಿ ತೆಗೆದುಕೊಂಡು ಕ್ಯಾಶಿಯಗೆ ಹೊಡೆದ. ಕೋಪದಲ್ಲಿ ಕುಮಾರಸ್ವಾಮಿ ಕೂಡ ಬಾಟಲಿ ಯಿಂದ ಹೊಡೆದರು. ನಂತರ ಅವರು ಆಸ್ಪತ್ರೆಗೆ ಹೋದರು. ನಾವು ಕೂಡ ಬಾರ್ ಮುಚ್ಚಿ ಕುಮಾರಣ್ಣನ ಮನೆಯವರಿಗೆ ಆಸ್ಪತ್ರೆಗೆ ಬರಲು ಹೇಳಿ ಆಸ್ಪತ್ರೆಗೆ ಹೋದೆವು. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೊರಗೆ ಬರುತ್ತಿದ್ದ ವ್ಯಕ್ತಿ ಕುಮಾರಸ್ವಾಮಿಯನ್ನು ನೋಡುತ್ತಿದ್ದಂತೆ ಏಕಾಏಕಿ ದಾಳಿ ಮಾಡಿ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಕ್ಯಾಷಿಯರ್ ಅಸು ನೀಗಿರುವುದಾಗಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರತ್ಯಕ್ಷದರ್ಶಿ ಪೊಲೀಸ್‌ಗೆ ಮಾಹಿತಿ ನೀಡಿದ್ದಾರೆ.


