ಬೆಂಗಳೂರು: ಪ್ರಯಾಣಿಕರಿಂದ ಬೇಕಾಬಿಟ್ಟಿ ಪ್ರಯಾಣ ದರ ವಸೂಲು ಮಾಡುತ್ತಿದ್ದ 1000ಕ್ಕೂ ಹೆಚ್ಚು ಆಟೋಗಳ ವಿರುದ್ಧ ಆರ್ ಟಿಓ ಅಧಿಕಾರಿಗಳು ಕೇಸು ದಾಖಲಿಸಿದ್ದಾರೆ.
ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ಆಟೋ ಚಾಲಕರು ಪ್ರಯಾಣಿಕರ ಬಳಿ ದುಪ್ಪಟ್ಟು ದರ ವಸೂಲು ಮಾಡುತ್ತಿರುವ ಬಗ್ಗೆ ಭಾರೀ ಪ್ರಮಾಣದಲ್ಲಿ ದೂರುಗಳು ಬಂದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಆರ್ ಟಿಓ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ ಒಂದು ವಾರದಿಂದ ನಗರದ 11 ಆರ್‌ಟಿಓ ಕಚೇರಿ ವ್ಯಾಪ್ತಿಯಲ್ಲಿ 20 ತಂಡಗಳನ್ನ ರಚಿಸಿ ಸಾರಿಗೆ ಅಧಿಕಾರಿಗಳು ನಗರದಾದ್ಯಂತ ಕಾರ್ಯಚರಣೆ ಕೈಗೊಂಡಿದ್ದಾರೆ. ಈ ವೇಳೆ ಒಟ್ಟು 3,531 ಆಟೋಗಳನ್ನ ತಪಾಸಣೆ ನಡೆಸಿದ್ದು, ಪರ್ಮೀಟ್, ದುಪ್ಪಟ್ಟು ದರ ವಸೂಲಿ ಇನ್ಶೂರೆನ್ಸ್, ಡಾಕ್ಯುಮೆಂಟ್‌ಗಳಿಲ್ಲದ 1,006 ವಾಹನಗಳ ವಿರುದ್ಧ ಕೇಸ್ ದಾಖಲಿಸಿ, 233 ಆಟೋಗಳನ್ನ ಸೀಜ್ ಮಾಡಿದ್ದಾರೆ.
ಈ ಆಟೋಗಳ ಪೈಕಿ ಅತಿ ಹೆಚ್ಚು ಆಟೋಗಳು ಆ್ಯಪ್ ಆಧಾರಿತ ಸಂಚಾರ ಮಾಡುತ್ತಿದ್ದ ಆಟೋಗಳಾಗಿದ್ದು, ನಗರವ್ಯಾಪಿ ಆ್ಯಪ್ ಆಧಾರಿತ ಆಟೋಗಳ ಮೇಲೆಯೇ ಅತಿ ಹೆಚ್ಚು ದೂರಗಳಿದ್ದು, ಅದರಂತೆ ಆಯಾ ವ್ಯಾಪ್ತಿಯಲ್ಲಿ ಹೆಚ್ಚುವರಿ ದರ ಪಡೆದು ಸಂಚಾರ ಮಾಡುತ್ತಿದ್ದ ಆ್ಯಪ್ ಆಧಾರಿತ ಆಟೋಗಳಿಗೂ ಆರ್‌ಟಿಓ ಬಿಸಿ ಮುಟ್ಟಿಸಿದೆ.