ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ AC, DC, ತಹಶೀಲ್ದಾರ್ ಕೋರ್ಟ್ ಗಳಲ್ಲಿ ಬಾಕಿ ಕೇಸುಗಳು ಶೀರ್ಘ ವಿಲೇವಾರಿ ಆಗುತ್ತಿರುವುದಕ್ಕೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಗ್ರಾಮಾಂತರ ಮತ್ತು ಎರಡು ಜಿಲ್ಲೆಗಳಲ್ಲಿ ಮಾತ್ರ AC ಮತ್ತು DC ಕೋರ್ಟ್ ಗಳಲ್ಲಿ ಐದು ವರ್ಷಕ್ಕೂ ಹಳೆಯದಾದ ಪ್ರಕರಣಗಳು ಬಾಕಿ ಇರುವುದಕ್ಕೆ ಅಸಮಾಧಾನಗೊಂಡು ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳಪಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಸಿಎಂ, Justice delayed is justice denied ಎನ್ನುವ ಮಾತನ್ನು ನೆನಪಿಡಿ. ಇದನ್ನು ಸಹಿಸಲು ಸಾಧ್ಯವಿಲ್ಲ. ಉಳಿದ ಜಿಲ್ಲೆಗಳಲ್ಲಿ ಪ್ರಗತಿ ಕಾಣುವಾಗ ಕೆಲವು ಮಾತ್ರ ಆಗುತ್ತಿಲ್ಲ ಎಂದರೆ ಸಹಿಸಲು ಸಾಧ್ಯವಿಲ್ಲ.. ಈ ಬಗ್ಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಸೂಚಿಸಿದರು. ಅಗತ್ಯವಿದ್ದರೆ ಹೇಳಿ ಹಚ್ಚುವರಿ AC, DC ಗಳನ್ನು ಕೊಡಬಹುದು ಎಂದರು.
ಅನರ್ಹ ಪಡಿತರ ಚೀಟಿ ರದ್ದು : ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೆ ಇದರಲ್ಲಿ ನಿರೀಕ್ಷಿತ ಪ್ರಗತಿ ಯಾಕೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಸುಮಾರು ಶೇ. 74ರಷ್ಟು ಬಿಪಿಎಲ್ ಕಾರ್ಡುಗಳಿದ್ದು, ಅನರ್ಹರನ್ನು ಗುರುತಿಸಿ ತೆಗೆದು ಹಾಕುವ ಮೂಲಕ ಅರ್ಹರಿಗೆ ಸವಲತ್ತು ಒದಗಿಸುವ ಕಾರ್ಯ ನಡೆಯಬೇಕಿದೆ ಎಂದು ಸೂಚನೆ ನೀಡಿಯಾಗಿತ್ತು. ಆದರೂ ಇದರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಆಗಿಲ್ಲ ಏಕೆ ಎಂದು ಪ್ರಶ್ನಿಸಿದರು.
ಇಂದಿರಾ ಕ್ಯಾಂಟೀನ್ ಕಾರ್ಯ ಪೂರ್ಣಗೊಳಿಸಿ: ನಮ್ಮ ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ ಎಲ್ಲಾ ಇಂದಿರಾ ಕ್ಯಾಂಟೀನ್ಗಳು ಕಾರ್ಯಾರಂಭ ಮಾಡಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಂದಿರಾ ಕ್ಯಾಂಟೀನ್ಗಳಿಗೆ ಇನ್ನೂ 5ಕಡೆ ಸ್ಥಳ ಗುರುತಿಸಬೇಕಾಗಿದೆ. ತಕ್ಷಣ ನಿವೇಶನ ಗುರುತಿಸಬೇಕು. ಹೊಸದಾಗಿ ಘೋಷಣೆ ಮಾಡಲಾಗಿರುವ 186 ಇಂದಿರಾ ಕ್ಯಾಂಟೀನ್ಗಳ ಪೈಕಿ ಕೇವಲ 103 ನಿರ್ಮಾಣ ಕಾರ್ಯ ಪೂರ್ಣಗೊಂಡಿವೆ. ಆಹಾರ ವಿತರಣೆ 43 ಇಂದಿರಾ ಕ್ಯಾಂಟೀನ್ಗಳಲ್ಲಿ ಮಾತ್ರ ಪ್ರಾರಂಭವಾಗಿದೆ. ಎಲ್ಲಾ ಕಡೆ ಆಹಾರ ವಿತರಣೆ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದರು.
ರೈತರ ಆತ್ಮಹತ್ಯೆ ಪರಿಹಾರ ವಿಳಂಬ ಏಕೆ: ಜಿಲ್ಲಾವಾರು ರೈತರ ಆತ್ಮಹತ್ಯೆ ಅಂಕಿ ಅಂಶಗಳನ್ನು ಗಮನಿಸಿದ ಮುಖ್ಯಮಂತ್ರಿಗಳು ಇನ್ನೂ 13 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇರುವುದನ್ನು ನೋಡಿ ಗರಂ ಆದ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಂದ ವರದಿ ಪಡೆದರು. ಹಾವೇರಿ ಸೇರಿ ಇನ್ನೆರಡು ಜಿಲ್ಲೆಗಳಲ್ಲಿ ಒಟ್ಟು 13 ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇರುವುದನ್ನು ಆದಷ್ಟು ಬೇಗ ಬಗೆಹರಿಸಿ ಪರಿಹಾರ ಒದಗಿಸಿ ಎನ್ನುವ ಸೂಚನೆ ನೀಡಿದರು.