ಗಾಂಧಿ, ನೆಹರು ಬಗ್ಗೆ ಅವಹೇಳನಕಾರಿಯಾಗಿ ದ್ವೇಷ ಭಾಷಣ ಮಾಡಿದ ಆರೋಪ ಹಿನ್ನೆಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಗುರುಮಠಕಲ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೆ.21ರಂದು ಯಾದಗಿರಿಯ ಗುರುಮಠಕಲ್ ಪಟ್ಟಣದಲ್ಲಿ ನಡೆದಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಯತ್ನಾಳ್, ಗಾಂಧಿ ಮತ್ತು ನೆಹರು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಬಿಎನ್ಎಸ್ 196, 299, 302, 352, 353 ಅಡಿ ಪೊಲೀಸರು ಸುಮೋಟೋ ಕೇಸ್ ದಾಖಲು ಮಾಡಿದ್ದಾರೆ.
ಗಾಂಧೀಜಿಯನ್ನು ಭಾರತದ ರಾಷ್ಟ್ರಪಿತ ಎಂದು, ಜವಾಹರ ಲಾಲ್ ನೆಹರುರನ್ನು ಮೊದಲ ಪ್ರಧಾನಿ ಎಂದು ನಾನು ಒಪ್ಪಿಕೊಳ್ಳಲ್ಲ. ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಕಾಶ್ಮೀರಕ್ಕೆ 370 ಕೊಟ್ಟಿದ್ದು ಯಾಕೆಂದ್ರೆ ಫಾರೂಕ್ ಅಬ್ದುಲ್ಲಾ ಜೊತೆ ನೆಹರುಗೆ ಲಿಂಕ್ ಇತ್ತು. ಇವರೆಲ್ಲರೂ ದೇಶದ ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡುತ್ತಿರಲಿಲ್ಲ. ಕೋಲ್ಕತ್ತಾದಿಂದ 555 ಸಿಗರೇಟ್ ತರಿಸಿಕೊಂಡು ಸೇದುತ್ತಿದ್ದರು. ಗಾಂಧಿ ಚರಕ ತಿರುಗಿಸಿದ್ದರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತಾ, ಹಾಗಿದ್ರೆ ನಾನು ಚರಕ ತಿರುಗಿಸುತ್ತೇನೆ, ನಾಳೆ ರಾಜ್ಯದ ಸಿಎಂ ಆಗ್ತೀನಾ ಎಂದು ಯತ್ನಾಳ್ ಪ್ರಶ್ನಿಸಿದ್ದರು. ಭಾರತದಲ್ಲಿರುವ ಮುಸ್ಲಿಮರು ವಂದೇ ಮಾತರಂ ಹೇಳಬೇಕು. ಇಲ್ಲದಿದ್ದರೆ ಗಾಂಧಿ ಕೊಟ್ಟ ಪಾಕಿಸ್ತಾನಕ್ಕೆ ಹೋಗಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಲವ್ ಜಿಹಾದ್ ಪ್ರಸ್ತಾಪಿಸಿ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ. ಈ ಭಾಷಣವು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಸಮುದಾಯಗಳ ನಡುವೆ ವೈಷಮ್ಯ ಸೃಷ್ಟಿಸುವ ಉದ್ದೇಶದಿಂದ ಮಾತನಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.


