ಬೆಳಗಾವಿ: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪುತ್ರ ಸಂತೋಷ್ ಜಾರಕಿಹೊಳಿ ವಿರುದ್ಧ ಜಿಲ್ಲೆಯ ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಇತ್ತೀಚೆಗೆ ನಡೆದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರು ಹಾಗೂ ಪೊಲೀಸರ ಸಮ್ಮುಖದಲ್ಲಿ ಕೈಯಲ್ಲಿ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ್ದಕ್ಕಾಗಿ ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಸಕರ ಪುತ್ರನ ಈ ಮೊಂಡಾಟದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಸಂತೋಷ ಜಾರಕಿಹೊಳಿ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ಜಾತ್ರೆಯಲ್ಲಿ ಸಾವಿರಾರು ಜನರು ಸೇರಿದ್ದ ಸಂದರ್ಭದಲ್ಲಿ, ಯಾವುದೇ ಮುಂಜಾಗ್ರತೆ ಇಲ್ಲದೆ ಸಂತೋಷ್ ಜಾರಕಿಹೊಳಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇದು ಸಾರ್ವಜನಿಕರ ಸುರಕ್ಷತೆಗೆ ಅಪಾಯ ತಂದೊಡ್ಡುವ ಸಾಧ್ಯತೆ ಇತ್ತು. ಅಲ್ಲದೆ, ಪೊಲೀಸರ ಉಪಸ್ಥಿತಿಯಲ್ಲೇ ಇಂತಹ ಕೃತ್ಯ ನಡೆದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ. ಈ ಘಟನೆಯು ರಾಜಕೀಯ ವಲಯದಲ್ಲೂ ಭಾರಿ ಸಂಚಲನ ಮೂಡಿಸಿದ್ದು, ಶಾಸಕ ರಮೇಶ್ ಜಾರಕಿಹೊಳಿ ಅವರು ಈ ಕುರಿತು ಯಾವ ಹೇಳಿಕೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.