ಕೆಎಸ್ಆರ್ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡಿಗರ ವಿರುದ್ಧ ಹೀನಾಯವಾಗಿ ಮಾತನಾಡಿರುವ ಎಂಇಎಸ್ ಮುಖಂಡನ ಶುಭಂ ಶಳಕೆ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಇಂದು (ಸೋಮವಾರ) ಬೆಳಗಾವಿಯ ಕೆಎಸ್ಸಾರ್ಟಿಸಿ ಘಟಕಕ್ಕೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದು ಬಸ್ ಆರಂಭದ ಕುರಿತು ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ.
ಎಂಇಎಸ್ ಮುಖಂಡ ಶುಭಂ ಶಳಕೆ, “ಕನ್ನಡ ಪರ ಹೋರಾಟಗಾರರು ನಾಲಾಯಕರು. ನಿರ್ವಾಹಕ ಬಾಲಕಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಅದಕ್ಕೆ ಪೊಲೀಸರು ಪೋಕ್ಸೋ ಕೇಸ್ ಹಾಕಿದ್ದಾರೆ. ಇಂತಹ ನೀಚ, ನಾಲಾಯಕ ನಿರ್ವಾಹಕ ಪರ ನಿಂತು ಕನ್ನಡ ಪರ ಸಂಘಟನೆಗಳು ಸಹ ನಾಲಾಯಕರು” ಎಂದು ಬೆಳಗಾವಿಯಲ್ಲಿ ವೀಡಿಯೊ ಮೂಲಕ ಹೇಳಿದ್ದ.
ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಮೋಹನ್ ಹಂಚಿನಮನಿ ಎಂಬಾತನನ್ನು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಐದಕ್ಕೇರಿದ್ದು ನಾಪತ್ತೆಯಾದ ಇನ್ನೂ ಕೆಲವು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆಯಿಂದ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿದೆ. ಮಹಾರಾಷ್ಟ್ರ-ಕರ್ನಾಟಕ ಬಸ್ ಸಂಚಾರ ಸ್ಥಗಿತಗೊಂಡಿದೆ. ಬೆಳಗಾವಿಯಿಂದ ಮಹರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ವಾಯುವ್ಯ ಸಾರಿಗೆಯ ಸುಮಾರು 150ಕ್ಕೂ ಅಧಿಕ ಬಸ್ಗಳು ಗಡಿವರೆಗೂ ಮಾತ್ರ ಸಂಚರಿಸುತ್ತಿವೆ. ಬಸ್ಗಳು ಇಲ್ಲದ ಕಾರಣ ಬೆಳಗಾವಿ, ಕೊಲ್ಲಾಪುರ, ಪುಣೆಯಲ್ಲಿ ಕರ್ನಾಟಕದ ಪ್ರಯಾಣಿಕರು ಪರದಾಡುವಂತಾಗಿದೆ.