ಮಡಿಕೇರಿ: ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿ ಆಗಿದ್ದರಿಂದ ನಾಲ್ವರು ಯುವಕರು ಮೃತಪಟ್ಟ ದಾರಣ ಘಟನೆ ಮಡಿಕೇರಿಯ ದೇವರಕೊಲ್ಲಿ ಎಂಬಲ್ಲಿ ಸಂಭವಿಸಿದೆ.
ಮಡಿಕೇರಿಯಿಂದ 50 ಕಿ.ಮೀ. ದೂರದಲ್ಲಿರುವ ದೇವರಕೊಲ್ಲಿಯ ಅಪಾಯಕಾರಿ ತಿರುವಿನಲ್ಲಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದ್ದು, ಕಾರು ನಜ್ಜುಗುಜ್ಜಾಗಿದೆ.
ದುರಂತದಲ್ಲಿ ಪೊನ್ನಂಪೇಟೆಯ ಗೋಣಿಕೊಪ್ಪ ನಿವಾಸಿಗಳಾದ ರಿಜ್ವಾನ್, ನಹೀದ್, ರಾಕಿಬ್ ಮತ್ತು ನಿಹಾದ್ ಮೃತಪಟ್ಟಿದ್ದಾರೆ. ಅಪಘಾತದ ಸಂಭವಿಸಿದ ಭೀಕರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆದಲ್ಲಿ ಅಸುನೀಗಿದ್ದಾರೆ.
ನಾಲ್ವರು ಯುವಕರು ಕಾರಿನಲ್ಲಿ ಮಡಿಕೇರಿಯಿಂದ ಸುಳ್ಯ ಕಡೆಗೆ ಪ್ರಯಾಣಿಸುತ್ತಿದ್ದರೆ, ಸುಳ್ಯ ಮಾರ್ಗವಾಗಿ ಮಡಿಕೇರಿಗೆ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ದೌಡಾಯಿಸಿದ್ದು, ಸ್ಥಳೀಯರ ನೆರವಿನಿಂದೊಂದಿಗೆ ರಕ್ಷಣಾ ಕಾರ್ಯ ನಡೆಸಿದರು.