ನವದೆಹಲಿ: ಕೆಂಪುಕೋಟೆ ಬಳಿ ಸಂಭವಿಸಿದ್ದ ಕಾರು ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು,ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ ಏಳಕ್ಕೆ ಏರಿಕೆ ಆಗಿದೆ.
ಕಾರು ಸ್ಪೋಟ ಸಂಭವಿಸುವ ಮುನ್ನ ಉಮರ್ ನಬಿಗೆ ಆಶ್ರಯ ನೀಡಿದ್ದ ಫರಿದಾಬಾದ್ ನ ಸೋಯಾಬ್ ನನ್ನು ಬಂಧಿಸಲಾಗಿದೆ, ಈತ ಪ್ರಕರಣದ 7ನೇ ಆರೋಪಿಯಾಗಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಾಹಿತಿ ನೀಡಿದೆ.
ಕಾರು ಸ್ಪೋಟ ಸಂಭವಿಸುವ ಮುನ್ನ ಈತ ಉಮರ್ ನಬಿಗೆ ಆಶ್ರಯ ಒದಗಿಸಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಎರಡನೇ ಆರೋಪಿ ಡಾ. ಮುಜಮ್ಮಿಲ್ ಶಕೀಲ್‌ನ್ನು ಕರೆದುಕೊಂಡು ಸೋಯಾಬ್ ನಿವಾಸಕ್ಕೆ ತನಿಖಾ ಅಧಿಕಾರಿಗಳು ಭೇಟಿ ನೀಡಿದ್ದರು. ನಂತರ ಆತನನ್ನು ವಶಕ್ಕೆ ಪಡೆದಿದ್ದಾರೆ. ಈತನ ಮನೆಯಲ್ಲಿ ಸ್ಫೋಟಕ ತಯಾರಿಸುವ ಕೆಲವೊಂದು ಸಲಕರಣೆಗಳು ಪತ್ತೆಯಾಗಿದ್ದು, ಅವುಗಳನ್ನು ಸೀಜ್ ಮಾಡಲಾಗಿದೆ.
ಬಂಧಿತ 7ನೇ ಆರೋಪಿ ಸೋಯಾಬ್ ಅಲ್ ಫಲಾಹ್ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗಿಯಾಗಿದ್ದು, ಈ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಎನ್‌ಐಎ ಈತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.


