ನವದೆಹಲಿ: ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ನಡೆದ ಕಾರು ಸ್ಫೋಟದ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಗೆ ವಹಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿ 25 ಕ್ಕೂ ಹೆಚ್ಚು ಜನರು ಗಾಯಗೊಂಡ ದೆಹಲಿ ಕೆಂಪು ಕೋಟೆ ಸ್ಫೋಟದ ತನಿಖೆಯನ್ನು ಎನ್ ಐಎ ಅಧಿಕೃತವಾಗಿ ವಹಿಸಿಕೊಂಡಿದೆ. ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿತ್ತು. ಪ್ರಾಥಮಿಕ ವಿಧಿವಿಜ್ಞಾನ ವರದಿಗಳು ಅಮೋನಿಯಂ ನೈಟ್ರೇಟ್, ಇಂಧನ ತೈಲ ಮತ್ತು ಡಿಟೋನೇಟರ್‌ಗಳ ಬಳಕೆಯನ್ನು ಸೂಚಿಸುತ್ತವೆ.
ಈ ಪ್ರಕರಣವನ್ನು ಎನ್ ಐಎ ಗೆ ಹಸ್ತಾಂತರಿಸಿದ ನಂತರ ಅದರ ತಂಡವು ತಕ್ಷಣವೇ ಕೆಂಪು ಕೋಟೆಯ ಬಳಿಯ ಸ್ಥಳಕ್ಕೆ ತಲುಪಿ ಸಮಗ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸಿತು, ಪುರಾವೆಗಳನ್ನು ಸಂಗ್ರಹಿಸಿತು ಮತ್ತು ಶಂಕಿತರ ಚಲನವಲನಗಳನ್ನು ಪತ್ತೆಹಚ್ಚಲಾರಂಭಿಸಿತು.
ನಮ್ಮ ಏಜೆನ್ಸಿಗಳು ಸ್ಫೋಟದ ಕಾರಣದ ಬಗ್ಗೆ ಶೀಘ್ರದಲ್ಲೇ ತೀರ್ಮಾನಕ್ಕೆ ಬರುತ್ತವೆ ಎಂದು ನಾನು ಭಾವಿಸುತ್ತೇನೆ. ಹಿರಿಯ ಎಫ್‌ಎಸ್‌ಎಲ್ ತಂಡವೂ ಬಂದಿದೆ” ಎಂದು ಸಚಿವ ಅಮಿತ್ ಶಾ ಹೇಳಿದ್ದಾರೆ.
ಸ್ಫೋಟದ ಉಂಟಾಗಿದ್ದ ಹುಂಡೈ ಐ20 ಕಾರು ಸೋಮವಾರ ಬೆಳಿಗ್ಗೆ 7.30ರ ಸುಮಾರಿಗೆ ಮೊದಲು ಫರಿದಾಬಾದ್‌ನ ಏಷ್ಯನ್ ಆಸ್ಪತ್ರೆಯ ಹೊರಗೆ ಕಾಣಿಸಿತ್ತು. ನಂತರ ಸೋಮವಾರ ಬೆಳಿಗ್ಗೆ 8.13ರ ಸುಮಾರಿಗೆ ಬದರ್ಪುರ್ ಟೋಲ್ ಬೂತ್‌ನಿಂದ ಫರಿದಾಬಾದ್ ರಸ್ತೆಯ ಮೂಲಕ ದೆಹಲಿಯನ್ನು ಪ್ರವೇಶಿಸಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.


