Sunday, September 21, 2025
Menu

ರಸ್ತೆ ಗುಂಡಿಗಳಿಂದ ಜನ ಪಡುತ್ತಿರುವ ಸಂಕಷ್ಟ ಕಾಣಿಸ್ತಿಲ್ಲವೇ: ಅಧಿಕಾರಿಗಳಿಗೆ ಸಿಎಂ ತರಾಟೆ, ಕಠಿಣ ಕ್ರಮದ ಎಚ್ಚರಿಕೆ

ಹಾಳಾಗಿರುವ ನಗರದ ರಸ್ತೆ ಗುಂಡಿಗಳಿಂದ ಜನ ಹೈರಾಣಾಗಿದ್ದು ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ  ತೀವ್ರ ಅಸಮಾಧಾನ ವ್ಯಕ್ತಪಡಿಸಿ,  ಜನರ ಪ್ರತಿನಿತ್ಯದ ಸಂಕಷ್ಟ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವಾ?  ತುರ್ತು ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರು ನಗರ ರಸ್ತೆಗಳ ಸುಧಾರಣೆ ಹಾಗೂ ಸಂಚಾರ ವ್ಯವಸ್ಥೆ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ  ಸಭೆ ನಡೆಯಿತು. ಈ ವೇಳೆ ಸಿಎಂ ಮಾತನಾಡಿ,  ಪ್ರತಿ ವಾರ್ಡ್ ನ ಎಂಜಿನಿಯರ್ ಗಳು ,  ಮುಖ್ಯ ಎಂಜಿನಿಯರ್ ಗಳು  ಏನು ಮಾಡುತ್ತಿದ್ದಾರೆ? ಇನ್ನು ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ವಹಿಸಲೇಬೇಕು ಮತ್ತು ರಸ್ತೆ ಗಳನ್ನು ಸಂಚಾರ ಯೋಗ್ಯ ಮಾಡಲೇಬೇಕು. ರಸ್ತೆ ನಿರ್ವಹಣೆಗೆ ಸೂಕ್ತ ಕ್ರಮ ವಹಿಸದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗುತ್ತಿಗೆದಾರರೊಂದಿಗೆ ಶಾಮೀಲಾಗದೆ ಒದಗಿಸಿರುವ ಅನುದಾನಕ್ಕೆ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು,ವೈಜ್ಞಾನಿಕವಾದ ಕಾಮಗಾರಿಗಳನ್ನು ಪೂರೈಸಲು ಕ್ರಮ ವಹಿಸಿ. ಮಳೆಗಾಲಕ್ಕೆ ಮುನ್ನವೇ ರಸ್ತೆ ಕಾಮಗಾರಿಗಳನ್ನು ಯಾಕೆ ಮಾಡುತ್ತಿಲ್ಲ, ಮಳೆಗಾಲದಲ್ಲಿಯೇ ಏಕೆ ಪ್ರಾರಂಭಿಸುವಿರಿ?  ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೂತನವಾಗಿ ನೇಮಕಗೊಂಡಿರುವ ಆಯುಕ್ತರು ಫೀಲ್ಡ್ ವರ್ಕ್ ಮಾಡಿ, ನಿಗಾ ಇರಿಸಬೇಕು.  ಬಿಡಿಎ, ಬಿಎಂಆರ್ ಸಿಎಲ್, ಜಲಮಂಡಳಿ ಅಧಿಕಾರಿಗಳ ನಡುವೆ ಸಮನ್ವಯವೇ ಇರುವುದಿಲ್ಲ ಎಂದು ಮುಖ್ಯಮಂತ್ರಿಗಳಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ಗುಂಡಿಗಳನ್ನು ಮುಚ್ಚಲು ಹಾಗೂ ಎಲ್ಲಾ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲು ಒಂದು ತಿಂಗಳ ಗಡುವು ನೀಡಲಾಗುವುದು, ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಸೂಚಿಸಿದರು.  ಮುಖ್ಯ ಆಯುಕ್ತರು ಪ್ರತಿ ವಾರ ಐದೂ ವಲಯಗಳ ಆಯುಕ್ತರೊಂದಿಗೆ ಸಭೆ ನಡೆಸಿ, ನಿರಂತರ ಸಂಪರ್ಕದಲ್ಲಿರಬೇಕು.  ಹಣದ ಕೊರತೆಯಿದ್ದರೆ ಆರ್ಥಿಕ ಇಲಾಖೆಯಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುತ್ತೇವೆ . ಆದ್ಯತೆ ಮೇರೆಗೆ ಕ್ರಮ ವಹಿಸಿ.  ಒಂದು ತಿಂಗಳ ನಂತರ ಮತ್ತೆ ಮೌಲ್ಯ ಮಾಪನ ನಡೆಸಲಾಗುವುದು ಎಂದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಸ್ತೆ ಜಾಲದಲ್ಲಿ  1648.43 ಕಿ. ಮೀ ಉದ್ದದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಿವೆ,  46.61ಕಿ.ಮೀ ಹೈಡೆನ್ಸಿಟಿ ಕಾರಿಡಾರ್ ರಸ್ತೆಗಳಿವೆ.  ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ, ಪಶ್ಚಿಮ ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆ ಗಳಲ್ಲಿ ಒಟ್ಟು 14795 ರಸ್ತೆ ಗುಂಡಿ ಗುರುತಿಸಲಾಗಿದೆ.  6749 ಗುಂಡಿಗಳನ್ನು ಮುಚ್ಚಲಾಗಿದ್ದು 8046 ಗುಂಡಿಗಳು ಮುಚ್ಚಲು ಬಾಕಿ ಇವೆ.  ಅಕ್ಟೋಬರ್ ಅಂತ್ಯ ವೇಳೆಗೆ ಎಲ್ಲಾ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈಗಾಗಲೇ 108.20 ಕಿ.ಮೀ ಉದ್ದದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ.‌143.68 ಕಿ.ಮೀ ಉದ್ದದ ರಸ್ತೆ ಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ.  ಈಗಾಗಲೇ 401.63 ಕಿ. ಮೀ ರಸ್ತೆಗಳು ಡಾಂಬರೀಕರಣ ಗೊಂಡಿದ್ದು, 440.92 ಕಿ.ಮೀ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದೆ.  ಒಟ್ಟಾರೆ 584.60 ಕಿ ಮೀ ಉದ್ದದ ರಸ್ತೆಗಳಲ್ಲಿ  ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.  ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆ ಗಳಲ್ಲಿ ಗುಂಡಿಗಳನ್ನು ಮುಚ್ಚಲು 2025-26 ರ ಆಯವ್ಯಯದಲ್ಲಿ 18 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ  ಎಂದು ಮಾಹಿತಿ ನೀಡಿದರು.

ಎಲ್ಲಾ ನಗರ ಪಾಲಿಕೆಗಳಿಗೂ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ರೂ. 25 ಕೋಟಿಗಳ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಪಾಲಿಕೆಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ.  ನೂತನ ತಂತ್ರಜ್ಞಾನ JETPATCHER ಬಳಸಿಕೊಳ್ಳಲು ರೂ. 2.50 ಕೋಟಿಗಳ ಮೊತ್ತದ ಟೆಂಡರ್ ಚಾಲ್ತಿಯಲ್ಲಿದ್ದು ಸದರಿ ತಂತ್ರಜ್ಞಾನದಿಂದ ತೇವಾಂಶವಿರುವ ಸಮಯದಲ್ಲಿಯೂ ಗುಂಡಿಗಳನ್ನು ಮುಚ್ಚಬಹುದಾಗಿದೆ.  ಐದೂ ಪಾಲಿಕೆಗಳೊಂದಿಗೆ ಸಮನ್ವಯ ಸಾಧಿಸಲು ಒಬ್ಬ ತಾಂತ್ರಿಕ ಸಮನ್ವಯಾಧಿಕಾರಿ ನೇಮಿಸಲು ಕ್ರಮ.  ಇಬ್ಬಲೂರು ಜಂಕ್ಷನ್, ಅಗರ, ವೀರಣ್ಣನ ಪಾಳ್ಯ, ನಾಗವಾರ ಮತ್ತು ಹೆಬ್ಬಾಳ  ಜಂಕ್ಷನ್ ಗಳಲ್ಲಿ ಜಲಮಂಡಳಿ ಮತ್ತು ಮೆಟ್ರೋ ಕಾಮಗಾರಿಯಿಂದ ಜಂಕ್ಷನ್ ಹಾಳಾಗಿದ್ದು ರೂ 400 ಕೋಟಿಗಳ ಹೊರವರ್ತುಲ ರಸ್ತೆ ಅಭಿವೃದ್ಧಿ ಯೋಜನೆಯಡಿ ಸಮಗ್ರ ವಾಗಿ ಅಭಿವೃದ್ದಿ ಪಡಿಸಲು ಉದ್ದೇಶಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು. .

Related Posts

Leave a Reply

Your email address will not be published. Required fields are marked *