Menu

ರ್‍ಯಾಂಕಿನ ಭ್ರಮೆದಾಗ ಹಾಲಿನ ರೇಟ್ ಹೆಚ್ಚಾದ್ರೂ ಕೇಳದಂಗಾಗೇತಿ!

ಮಕ್ಕಳಿಗೆ ರ್‍ಯಾಂಕ್‌ಗಿಂತ ಜೀವನ ಮುಖ್ಯ ಅನ್ನೋದ ಹೇಳಿಕೊಡಬೇಕಾಗೇತಿ. ಹಾಲಿನ ರೇಟ್ ಜಾಸ್ತಿ ಮಾಡಿರೋ ಸರ್ಕಾರ ಅದನ್ನ ಉತ್ಪಾದನೆ ಮಾಡೋ ರೈತಗ ಅದರ ಲಾಭಾ ಕೊಡಬೇಕಲ್ಲಾ? ಹಾಲು  ಉತ್ಪಾದನೆ ಮಾಡಾಕ ರೈತ ಎಷ್ಟು ಕಷ್ಟಾ ಪಡ್ತಾನು ಅನ್ನೋದರ ಈಗಿನ ಹುಡುಗೂರಿಗೆ ಗೊತ್ತಿರಬೇಕಲ್ಲಾ?

ಸುಮ್ನ ನೀವು ಸಣ್ಣಾರಿದ್ದಾಗ ಸಾಲಿ ಸೂಟಿ ಕೊಟ್ಟಾಗಿಂದ ನೆನಪ್ ಮಾಡ್ಕೋರಿ, ಎಮ್ಮಿ ಮೇಯಿಸಾಕ ಹೋಗಿ ಮಧ್ಯಾಹ್ನ ಬಿಸಲಾಗ ಎಮ್ಮಿನ ಕೆರ್‌ಯಾಗ ಮಲಗಿಸಿ ಅದ ನೀರಾಗ ಎಮ್ಮಿಕೂಡ ಈಸ್ಯಾಡಿ ಅಲ್ಲೆ ಮಾಯಿನ ಗಿಡದಾಗಿನ ತೂತಾಪುರಿ ಕಾಯಿ ಹರದು ಕಲ್ಲಿಲ್ಲೆ ಜಜ್ಜಿ ತಿಂದು, ಕವಳಿ ಹಣ್ಣ ಆಗಿದ್ರ ಮೈಯಿಗಿ ಮುಳ್ಳು ಚುಂಚಿಸಿ ಕೊಂಡು ಹರಕೊಂಡು ತಿಂದು, ಆಜು ಬಾಜು ಊರಾಗ ಯಾರದರ ಮದುವಿ ಇದ್ರ, ಅವರೇನು ಕರೀಲೆಬೇಕಂತೇ ನಿಲ್ಲಾ, ಹೋಗಿ ಮದುವಿ ಮನ್ಯಾಗ ಊಟಾ ಮಾಡಿ, ಊರಾಗ ಜಾತ್ರಿ ಇದ್ರ ಇರೋ ಯಾಡ್ ರೂಪಾಯಿದಾಗ ಬೇಕಾದ್ದು, ಬ್ಯಾಡಾದ್ದು ತಿಂದು ನಾಲ್ಕಾಣೆದು ಒಂದು ಸೀಟಿ ತೊಗೊಂಡು ಊರ ತುಂಬ ಊದ್ಕೋಂತ. ಸಂಜಿಕ ದನಕ್ಕೆ ನೀರು ಕುಡ್ಸಿಲ್ಲಾ, ಸೆಗಣಿ ಒಗದಿಲ್ಲಾ ಅಂತೇಳಿ ಅಪ್ಪಾ ಕುಂಡಿಮ್ಯಾಲ್ ಯಾಡ್ ಹೊಡೆದ್ರೂ ಹೊಡಸ್ಕೊಂಡು ರಣಾ ರಣಾ ಬಿಸಿಲಾಗ ಬರಗಾಲ್ಲೇನ ತಿರುಗ್ಯಾಡಿದ್ರೂ ಬ್ಯಾಸರ ಇರತ್ತಿರಲಿಲ್ಲಾ.
ಯಜಮಾನಿ ಎದ್ ಕೂಡ್ಲೆ ಕರೆ ಚಾ ಮಾಡಿ ತಂದುಕೊಟ್ಟು, ಯಾಕ ಹಾಲ ಹಾಕಿಲಲ್ಲಾ ಅಂದೆ, ಹಾಲಿನ ರೇಟ್ ಜಾಸ್ತಿ ಆಗೇತಿ ಕರೇ ಚಾ ಕುಡೀರಿ ನಿಮ್ ಮುಖಾ ಏನ್ ಕರ್ರಗ ಆಗುದಿಲ್ಲ ಅಂತ ಸರ್ಕಾರದ ಮ್ಯಾಲಿನ ಸಿಟ್ಟು ತಂದು ಸೀದಾ ನನ್ ಮಖಕ್ಕ ಹೊಡೆದಂಗ ಹೇಳಿದ್ಲು.

ಹಾಲಿನ ರೇಟ್ ಏರಿಸ್ಯಾರಂತೇಳಿ ಕರೆ ಚಾ ಕುಡುದ್ರ ಕರೆಂಟ್ ರೇಟ್ ಏರಿಸ್ಯಾರಂತೇಳಿ ಕತ್ತಲದಾಗ ಕುಂದ್ರೂದಾ, ನೀರಿನ ರೇಟ್ ಏರಿಸ್ಯಾರಂತೇಳಿ ನೀರ್ ಕುಡಿಯೋದು ಬಿಡೋದಾ ಎಲ್ಲಾದರ ರೇಟೂ ದಿನಕ ದಿನಾ ಏರಕೋಂತನ ಹೊಂಟೇತಿ, ನಾವೂ ಅದಕ್ಕ ತಕ್ಕಂಗ ಹೊಂದ್ಕೊಂಡು ಹೋಗೂದು ಕಲತ್ ಬಿಟ್ಟೇವಿ. ಮನ್ಯಾಗ ಹೆಂಡ್ತಿ ಜೋರ್ ಬಾಯಿ ಮಾಡಿದ್ರ ಹೊಳ್ಳಿ ಮಾತ್ಯಾಡಾಕೂ ಆಗದಿರೋ ಗಂಡ್ಸೂರು ನಾವು ಇನ್ನ ಸರ್ಕಾರದ ನಿರ್ಧಾರ ಪ್ರಶ್ನೆ ಮಾಡ್ತೇವಾ?

ನಾವು ಸಣ್ಣಾರಿದ್ದಾಗ ನಮ್ಮಜ್ಜಾ ಹೇಳಾಂವ, ದೇಶದಾಗ ಬರಗಾಲ ಬಿದ್ರೂನು ಬ್ರಿಟೀಷರು ಜನರ ಮ್ಯಾಲ್ ತೆರಿಗೆ ಹಾಕಿದ್ರಂತ ಅದರ ವಿರುದ್ಧ ಕರ ನಿರಾಕರಣೆ ಚಳುವಳಿ ಮಾಡಿ ಜೈಲಿಗಿ ಹೋಗಿ ಬಂದಿದ್ದಂತ. ಬ್ರಿಟೀಷರು ಉಪ್ಪಿನ ಮ್ಯಾಲ್ ತೆರಿಗೆ ಹಾಕಿದ್ಕ ಗಾಂಧೀಜಿ ಬ್ರಿಟೀಷ್ ಸರ್ಕಾರದ ವಿರುದ್ಧ ಮುನ್ನೂರಾ ಐವತ್ತು ಕಿಲೋ ಮೀಟರ್ ದಂಡಿಯಾತ್ರೆ ಮಾಡಿ ಉಪ್ಪಿನ ಸತ್ಯಾಗ್ರಹ ನಡೆಸಿದ್ರು. ಆ ಸತ್ಯಾಗ್ರಹ ಭಾರತದ ಸ್ವರಾಜ್ಯದ ಕನಸಿಗೆ ಪ್ರೇರಣೆ ಆತು. ದೇಶದ ಸ್ವಾತಂತ್ರ್ಯ ಹೋರಾಟಕ್ಕ ದೊಡ್ಡ ತಿರುವು ಕೊಟ್ಟಿತು.

ಈಗೆಲ್ಲಾ ಕಾಂಪಿಟೇಟಿವ್ ವರ್ಲ್ಡ್ ಅಂತೇಳಿ ಭ್ರಮೆಕ್ ಬಿದ್ದು, ಮಕ್ಕಳಗಿ ನಮ್ಮ ದೇಶದ ಇತಿಹಾಸನ ಓದಸ್ದ, ಗಂಡಾ ಹೆಂಡ್ತಿ ಹಗಲಿ ಯಾವುದೋ ರಾತ್ರಿ ಯಾವುದೋ ಇಬ್ರೂ ಒಬ್ಬರಿಗೊಬ್ರು ಮಕಾ ನೋಡ್ಡ ದುಡುದು ಮಕ್ಕಳ್ನ ಇಂಜನೀ ಯರೋ, ಡಾಕ್ಟರ್ನ ಮಾಡಾಕ್ ಇರೋ ಒಂದು ಜೀವನದಾಗ ಅರ್ಧಾ ಆಯುಷ್ಯ ಆದ್ರಾಗ ಕಳ್ಯಾಕತ್ತಾರು. ಹಾಲಿನ ರೇಟ್ ಜಾಸ್ತಿ ಮಾಡಿರೋ ಸರ್ಕಾರ ಅದನ್ನ ಉತ್ಪಾದನೆ ಮಾಡೋ ರೈತಗ ಅದರ ಲಾಭಾ ಕೊಡಬೇಕಲ್ಲಾ? ಹಾಲು ಎಲ್ಲಿಂದ ಬರತಾವು, ಹೆಂಗ್ ಬರತಾವು, ಅದನ್ನ ಉತ್ಪಾದನೆ ಮಾಡಾಕ ರೈತ ಎಷ್ಟು ಕಷ್ಟಾ ಪಡ್ತಾನು ಅನ್ನೋದರ ಈಗಿನ ಹುಡುಗೂರಿಗೆ ಗೊತ್ತಿರಬೇಕಲ್ಲಾ? ಈಗ ಎಲ್‌ಕೆಜಿಯಿಂದ ಪಿಯುಸಿ, ಎಸೆಸ್ಸೆಲ್ಸಿ ಓದೋ ಮಕ್ಕಳ ಅಪ್ಪಾ ಅವ್ವಾ ಎಲ್ಲಾರೂ ಹಳ್ಳಿಂದ ಬಂದಾರ ಇರತಾರು, ಸಾಲಿ ಸೂಟಿ ಕೊಟ್ಟಾಗ ಆ ಹುಡುಗೂರಿಗೆ ಆ ಟೂಶನ್ನೂ, ಈ ಕ್ಲಾಸು ಅಂತ ಮತ್ತ ಮುಂಜಾನಿಂದ ಸಂಜಿಮಟಾ ಸಿಟ್ಯಾಗನ ಕುಂದ್ರಿಸಿ ತಲಿ ಕೆಡಸಬ್ಯಾಡ್ರಿ, ಹಳ್ಳಿಗಿ ಅಜ್ಜಾ ಅಮ್ಮನ ಊರಿಗಿ ಕಳಿಸಿ ಕೋಡ್ರಿ ಅವರಿಗೆ ಹಾಲು ಹೆಂಗ್ ಬರತಾವು, ಅಕ್ಕಿ ಎದರಿಂದ ಅಕ್ಕಾವು ಅನ್ನೂದು ತಿಳಿತೈತಿ. ಆದ್ರಿಗಿಂತ ಹೆಚ್ಚಾಗಿ ಹುಡುಗೂರು ಪ್ರೈವೇಟ್ ಸ್ಕೂಲ್‌ನ್ಯಾರ್ ಗ್ರೇಡ್ ಹುಚ್ಚಿಗೆ ಟಾಪರ್ ಲಿಸ್ಟ್‌ನ್ಯಾಗ್ ಬರಾಕ್ ಯಾಡ್ ಮಾರ್ಕ್ ಕಡಿಮಿ ಬಂದು ಅಂತೇಳಿ ಜೀವನಾ ಕಳಕೊಳ್ಳೋದ್ರಕ್ಕಿಂತ ನಾಕಲ್ಲಾ ಹತ್ತು ಮಾರ್ಕ್ಸ್ ಕಡಿಮಿ ಬಿದ್ರೂ, ಬದುಕಿ ತೋರಿಸ್ತೀನಿ ಅನ್ನೂ ಮನಸ್ಥಿತಿ ಬೆಳಸೂದು ಭಾಳ ಮುಖ್ಯ ಐತಿ. ಎಲ್ಲಾರೂ ಇಂಜನೀಯರ್ ಮಾಡಾಕ್ ಹೋಗಿ, ಇಂಜನೀಯರ್ ಓದಿದಾರಿಗೆಲ್ಲಾ ಕೆಲಸ ಸಿಗದ ಏನರ ಟೈಪಿಂಗ್ ಕೆಲಸಾನರ ಇದ್ರ ಕೋಡ್ರಿ ಅನ್ನೂ ಸ್ಥಿತಿಗೆ ಬಂದು ನಿಂತಾರು.

ನಮ್ಮ ದೇಶದ ದೊಡ್ಡ ಸಾಫ್ಟ್‌ಪೇರ್ ಕಂಪನಿಯೊಂದು ಕ್ಯಾಂಪಸ್ ಸೆಲೆಕ್ಸನ್ ಮಾಡಿ ಕೆಲಸಾ ಕೊಡ್ರೀವಿ ಅಂತೇಳಿ ಸೇರಿಸಿಕೊಂಡು ಆರ ತಿಂಗಳದಾಗ ಬೌನ್ಸರ್ಸ್‌ನ ಮುಂದು ನಿಂದ್ರಿಸಿ ಸೈ ಮಾಡಕೊಂಡು ಕೆಲಸದಿಂದ ತಗೆದು ಹಾಕ್ಯಾರಂತ. ಎಷ್ಟೋ ಮಂದಿ ಗಂಡಾ ಹೆಂಡ್ತಿ ಸಾಫ್ಟ್ ವೇರ್ ಇಂಜನೀಯರ್ಸ್ ಗೋಳು ಕಂಪ್ಯೂಟರ್ ಮುಂದು ಕುಂತು ಕುಂತು ಸಾಕಾಗಿ ಮನಿಗಿ ಬಂದು ಅಡಗಿ ಮಾಡೂ ಸಲುವಾಗಿ ಜಗಳಾ ಮಾಡಿ ಡೈವರ್ಸ್ ತೊಗೊಂಡು ನಾನೊಂದು ತೀರಾ ನೀನೊಂದು ತೀರಾ ಅಂತೇಳಿ ಗೂಗಿ ಥರಾ ಬದಕಾಕತ್ತಾರು. ಅದ್ರಾಗ ಇದ್ದಿದ್ರಾಗ ಸಣ್ಣಾರಿದ್ದಾಗ ಸಾಲಿ ಸೂಟಿ ಕೊಟ್ಟಾಗ ಅಜ್ಜನ ಊರಿಗಿ ಹೋಗಿ ಬಂದಾರು ಕಂಪ್ಯೂಟರ್ ಮುಂದು ಕುಂದ್ರೂದು ಬ್ಯಾಸರಾಗಿತ್ತಂದ್ರ ನೌಕರಿ ಬಿಟ್ಟು ಹೆಂಡ್ತಿ ಕರಕೊಂಡು ಹೊಲಾ ಮಾಡ್ಕೊಂಡು ಅರಾಮ ಇರೂನು ಅಂತೇಳಿ ಗುಡಚಾಪಿ ಕಟಗೊಂಡು ಊರ ಕಡೆ ಹೊಂಟಾರು.

ಸಾಲಿ ಸೂಟಿ ಕೊಟ್ಟಾಗ ಮಕ್ಕಳಿಗೆ ಅಜ್ಜಾ ಅಮ್ಮನ ಊರಾಗ ಇರೂದ ಒಂದು ಮಜಾ, ಸುಮ್ನ ನೀವು ಸಣ್ಣಾರಿದ್ದಾಗ ಸಾಲಿ ಸೂಟಿ ಕೊಟ್ಟಾಗಿಂದ ನೆನಪ್ ಮಾಡ್ಕೋರಿ, ಎಮ್ಮಿ ಮೇಯಿಸಾಕ ಹೋಗಿ ಮಧ್ಯಾಹ್ನ ಬಿಸಲಾಗ ಎಮ್ಮಿನ ಕೆರ್‌ಯಾಗ ಮಲಗಿಸಿ. ಅದ ಕೆರ್‌ಯಾಗನ ಬಂಗಾರದ ಬಣ್ಣದ ನೀರಾಗ ಎಮ್ಮಿಕೂಡ ಈಸ್ಯಾಡಿ ಅಲ್ಲೆ ಮಾಯಿನ ಗಿಡದಾಗಿನ ತೂತಾಪುರಿ ಕಾಯಿ ಹರದು ಕಲ್ಲಿಲ್ಲೆ ಜಜ್ಜಿ ಅನ್ನ ತಿಂದು ಮಧ್ಯಾಹ್ನ ಊಟದ ಖಬರ ಇಲ್ಲದ ತಿರಗ್ಯಾಡಿ, ಅಡಮಳಿ ಆಗಿ ಕವಳಿ ಹಣ್ಣ ಆಗಿದ್ರ ಮೈಯಿಗಿ ಮುಳ್ಳು ಚುಂಚಿಸಿಕೊಂಡು ಹರಕೊಂಡು ತಿಂದು, ಆಜು ಬಾಜು ಊರಾಗ ಯಾರದರ ಮದುವಿ ಇದ್ರ, ಅವರೇನು ಕರೀಲೆಬೇಕಂತೇನಿಲ್ಲಾ, ಹೋಗಿ ಮದುವಿ ಮನ್ಯಾಗ ಊಟಾ ಮಾಡಿ, ಊರಾಗ ಜಾತ್ರಿ ಇದ್ರ ಇರೋ ಯಾಡ್ ರೂಪಾಯಿದಾಗ ಬೇಕಾದ್ದು, ಬ್ಯಾಡಾದ್ದು ತಿಂದು ನಾಲ್ಕಾಣೆದು ಒಂದು ಸೀಟಿ ತೊಗೊಂಡು ಊರ ತುಂಬ ಊದ್ಕೋಂತ. ಊರ ಮಂದಿ ಕಡಿಂದ ಬೈಸ್ಕೋಂತ, ಸಂಜಿಕ ದನಕ್ಕೆ ನೀರು ಕುಡ್ಸಿಲ್ಲಾ, ಸೆಗಣಿ ಒಗದಿಲ್ಲಾ ಅಂತೇಳಿ ಅಪ್ಪಾ ಕುಂಡಿಮ್ಯಾಲ್ ಯಾಡ್ ಹೊಡೆದ್ರೂ ಹೊಡಸ್ಕೊಂಡು ರಣಾ ರಣಾ ಬಿಸಿಲಾಗ ಬರಗಾಲ್ಲೇನ ತಿರುಗ್ಯಾಡಿದ್ರೂ ಬ್ಯಾಸರ ಇರತ್ತಿರಲಿಲ್ಲಾ.

ಮಕ್ಕಳಿಗೆ ರ್‍ಯಾಂಕ್‌ಗಿಂತ ಜೀವನ ಮುಖ್ಯ ಅನ್ನೋದ ಹೇಳಿಕೊಡಬೇಕಾಗೇತಿ. ಎಸೆಸ್ಸೆಲ್ಸಿ, ಪಿಯುಸ್ಯಾಗ ಹಂಡ್ರೆಡಕ್ ಹಂಡ್ರೆಡ್ ಮಾರ್ಕ್ಸ್ ತೊಗೊಂಡು ದಂಡಿ ಸತ್ಯಾಗ್ರಹ ಯಾಕ್ ನಡೀತು ಅನ್ನೋದ ಗೊತ್ತಿರಲಿಲ್ಲ ಅಂದ್ರ, ಅಷ್ಟು ಮಾರ್ಕ್ಸ್ ತೊಗೊಂಡು ಏನ್ ಮಾಡೋದು, ನಾವೆಲ್ಲಾ ಕಲಿವ್ಯಾಗ ಗಣಿತ. ವಿಜ್ಞಾನ, ಇಂಗ್ಲೀಷ್ ಹೆಂಗರ ಮಾಡಿ ಮೂವತೈದು ಮಾರ್ಕ್ಸ್ ಬಿದ್ದು ಪಾಸಾದ್ರ ಸಾಕು ಅಂತ ಬೇಡ್ಕೊಂಡು ಪರೀಕ್ಷೆ ಬರದಾರು ನಾವೆಲ್ಲಾ. ಆದ್ರೂ, ನಮಗ ಈಗೂ ಪೈಥಾಗೋರಸನ ಪ್ರಮೇಯನೂ ನೆನಪೈತ್ತಿ. ನ್ಯೂಟನ್ನನ್ನ ಮೂರನೇ ನಿಯಮಾನೂ ನೆನಪೈತಿ. ಈಗಿನ ಹುಡುಗೂರಿಗೆ ಜಾಸ್ತಿ ಮಾರ್ಕ್ಸ್ ಬೀಳಾಕತ್ತಾವು ಅಂದ್ರೆ ಅವರು ಹಂಡ್ರೆಡ್ ಪರ್‌ಸೆಂಟ್ ಶ್ಯಾಣಾರದಾರಂತೇನಿಲ್ಲಾ, ಖಾಸಗಿ ಸಾಲ್ಯಾರು ತಮ್ಮ ಡೋನೇಷನ್ ಜಾಸ್ತಿ ಮಾಡ್ಕೊಳ್ಳಾಕ ನಡಸಿರೊ ಹೊಸ ದಂಧೆ ಇದು. ಅಪ್ಪಾ ಅವ್ವಗ ರ್‍ಯಾಂಕ್ ಹುಚ್ಚ ಹಿಡದೈತಿ ಅದನ್ನ ಖಾಸಗಿ ಸಾಲ್ಯಾರು ಬಂಡವಾಳ ಮಾಡ್ಕೊಳ್ಳಾಕತ್ತಾರು ಅಷ್ಟ.

ಮಕ್ಕಳಿಗೆ ಸೈನ್ನು, ಮ್ಯಾಥ್ಸ್, ಇಂಗ್ಲೀಷ್ ಕಲಸೂದಷ್ಟ ಅಲ್ಲಾ, ಅದರ ಜೋಡಿ ಇತಿಹಾಸ ಕಲಸೂದು ಭಾಳ ಮುಖ್ಯ ಐತಿ. ಡಿಗ್ರಿ ಮುಗಿಮಟಾ ಎಲ್ಲಾರಿಗೂ ಇತಿಹಾಸನ ಒಂದ್ ಸಬ್ಜೆಕ್ಟ್ ಕಡ್ಡಾಯ ಮಾಡಬೇಕು ಅಂತ ಅನಸ್ತೈತಿ. ಅವಾಗ ನಮ್ಮ ಇತಿಹಾಸದಾಗ ಮೊಗಲರಿಂದ ಹಿಡದು ಬ್ರಿಟೀಷರ ಮಟಾನೂ ಯಾವಾಗ್ಯಾವಾಗ ಆಳು ಸರ್ಕಾರಗೋಳು ಜನರ ವಿರುದ್ಧ ತೀರ್ಮಾನ ತೊಗೊಂಡಾಗ ಜನರು ಹೆಂಗ್ ದಂಗೆ ಎದ್ದು ಹೋರಾಟ ಮಾಡಿದ್ರು ಅನ್ನೋದು ಗೊತ್ತಕ್ಕೇತಿ. ಸ್ವಾತಂತ್ರ್ಯ ಬಂದ ಮ್ಯಾಲನೂ ಗೇಣಿದಾರರ ಸತ್ಯಾಗ್ರಹ, ಜೆಪಿ ಅವರ ಸಂಪೂರ್ಣ ಕ್ರಾಂತಿ ಎಲ್ಲಾ ಆಳು ಸರ್ಕಾರಾನ ಅಳಿಗ್ಯಾಡಿಸಿದ್ದು.

ಈಗಿನ ಪರಿಸ್ಥಿತಿ ನೋಡಿದ್ರ ಆಳು ಸರ್ಕಾರಕ್ಕೂ ನಮಗೂ ಏನೂ ಸಂಬಂಧನ ಇಲ್ಲನ ಅನ್ನಾರಂಗ ಜನರು ನಡ ಕೊಳ್ಳಾಕತ್ತಾರು ಅಂತ ಅನಸ್ತೈತಿ. ಯಾವುದ ವ್ಯವಸ್ಥೆ ಜನಸಾಮಾನ್ಯರ ವಿರುದ್ಧ ನಡಕೊಳ್ಳಾಕತ್ತರೂ ಅದನ್ನ ಪ್ರಶ್ನೆ ಮಾಡದಿದ್ದರ ಅಲ್ಲಿ ಪ್ರಜಾಪ್ರಭುತ್ವ ಜೀವಂತ ಇಲ್ಲಂತ ಅರ್ಥ.

ಒಂದು ಸರ್ಕಾರ ಜನರಿಗೆ ಮ್ಯಾಲಿಂದ ಮ್ಯಾಲ್ ತೆರಗಿ ಹಾಕಾಕತ್ತೇತಿ ಅಂದ್ರ ಆ ದುಡ್ಡಿನಿಂದ ಜನರ ಕಲ್ಯಾಣ ಎಷ್ಟು ಮಾಡ್ತಾರು ಅನ್ನೊದು ನೋಡಬೇಕಲ್ಲಾ ಎಲ್ಲಾದ್ಕೂ ಟ್ಯಾಕ್ಸ್ ಹಾಕಿ. ಅವರ ಪಗಾರ ಹೆಚ್ಗಿ ಮಾಡ್ಕೊಂಡು, ರಾಜ್ಯ ಸಮೃದ್ದ ಐತಿ ಅಂತೇಳಿ ವಿಧಾನಸೌಧಕ್ಕ ಲೈಟ್ ಹಾಕ್ಸಿ, ಅದನ್ನ ನೋಡಾಕ್ಕೂ ಜನರಿಂದ ರೊಕ್ಕಾ ವಸೂಲಿ ಮಾಡೋದಂದ್ರ, ನಾವ ನಮ್ ಸೇವಕರ್ನ ಆರಿಸಿಕೊಂಡು ಅವರನ ನೋಡಾಕ ನಾವ ರೊಕ್ಕಾ ಕೊಟ್ಟು ಹೋಗು ವಂಗ ಆಗೇತಿ ಅಂದ್ರ ಇತಿಹಾಸದಾಗ ಗುಲಾಮಿ ಸಂತತಿ ಅಂತ ಪಾಠ ಇತ್ತು ಅದು ನೆನಪಿಗಿ ಬರತೈತ್ತಿ.

ನಮ್ಮಾರು ನಮ್ಮ ಮ್ಯಾಲ್ ತೆರಿಗೆ ಹಾಕೋದು ಹೋಗ್ಲಿ ಅಮೇರಿಕಾ ಅಧ್ಯಕ್ಷ ಟ್ರಂಪ್‌ನೂ ಎಲ್ಲಾರ ಮ್ಯಾಲೂ ಟ್ಯಾಕ್ಸ್ ಹಾಕಾಕ್ ಶುರು ಮಾಡ್ಯಾನು. ಅವನ ಲೆಕ್ಕಾಚಾರ ನೋಡಿದ್ರ ಮತ್ತ ವಸಾಹತುಶಾಹಿ ಕಾಲ ಶುರುವಕ್ಕೇತನ ಅಂತ ಅನಸ್ತೈತಿ. ಮತ್ತ ಯಾಡ್ನೂರು ಮುನ್ನೂರು ವರ್ಷ ಬಾರೆದಾರ ಕಡೆ ಆಳಿಸಿಕೊಳ್ಳೋ ಬದ್ಲು. ನಮ್ಮದ ಸರ್ಕಾರ ಜನರ ಪರವಾಗಿ ಅಧಿಕಾರ ನಡೆಸುವಂಗ ಮಾಡಿ, ಚಾ ಕ್ಕ ನಮಗ ಬೇಕಾದಷ್ಟು ಹಾಲು ಹಾಕೊಂಡು ಕುಡಿಯುವುದು ಚೊಲೊ ಅನಸ್ಸೆತಿ.

-ಶಂಕರ ಪಾಗೋಜಿ, ಲೇಖಕರು

Related Posts

Leave a Reply

Your email address will not be published. Required fields are marked *