ತಿರುವನಂತಪುರಂ: ಕನ್ನಡ ಭಾಷೆಯ ಬಗ್ಗೆ ನೀಡಿದ ಹೇಳಿಕೆಯ ಬಗ್ಗೆ ನಾನು ಕ್ಷಮೆ ಕೇಳಲಾರೆ. ಏಕೆಂದರೆ ಇತಿಹಾಸಕಾರರು ಏನು ಹೇಳಿದ್ದಾರೋ ಅದನ್ನು ಹೇಳಿದ್ದೇನೆ ಅಷ್ಟೆ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ.
ಕೇರಳದ ತಿರುವನಂಪುರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂಬ ಹೇಳಿಕೆಯ ಬಗ್ಗೆ ಗೊಂದಲ ಮೂಡಿಸಲಾಗುತ್ತಿದೆ. ನಾನು ಹೇಳಿದ್ದೇನೋ ಅದನ್ನು ಪ್ರೀತಿಯಿಂದ ಹೇಳಿದ್ದೇನೆ ಎಂದರು.
ನಾನು ಏನು ಹೇಳಿದ್ದೇನೆ ಅದನ್ನು ಪ್ರೀತಿಯಿಂದ ಹೇಳಿದ್ದೇನೆ. ಇತಿಹಾಸಕಾರರು ನನಗೆ ನೀಡಿದ್ದ ಮಾಹಿತಿಯನ್ನು ಹಂಚಿಕೊಂಡಿದ್ದೇನೆ. ಇದನ್ನು ಹೊರತುಪಡಿಸಿ ಯಾವುದೇ ಅರ್ಥದಲ್ಲಿ ಹೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ತಮಿಳುನಾಡು ಹೊರರಾಜ್ಯದವನ್ನು ರಾಜಕೀಯವಾಗಿ ಗುರುತಿಸಿ ಸ್ಥಾನ ಮಾನ ನೀಡಿದ ಸಾಕಷ್ಟು ಉದಾಹರಣೆಗಳಿವೆ. ಆಂಧ್ರಪ್ರದೇಶದ ರೆಡ್ಡಿ, ಕೇರಳದ ಮೆನನ್ ಮತ್ತು ಕರ್ನಾಟಕದ ಮಂಡ್ಯ ಜಿಲ್ಲೆಯ ಅಯ್ಯಂಗಾರ್ ಅವರನ್ನು ಮುಖ್ಯಮಂತ್ರಿ ಆಗಿ ಮಾಡಿದೆ ಎಂದು ಅವರು ಹೇಳಿದರು.
ರಾಜಕೀಯವಾಗಿ ಭಾಷೆ ಬಗ್ಗೆ ಮಾತನಾಡುವುದು ಸರಿಯಲ್ಲ. ನನ್ನನ್ನೂ ಸೇರಿದಂತೆ ರಾಜಕಾರಣಿಗಳಿಗೆ ಈ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಈ ಬಗ್ಗೆ ಇತಿಹಾಸಕಾರರು ಮತ್ತು ಭಾಷಾ ತಜ್ಞರ ಜೊತೆ ಆಳವಾದ ಚರ್ಚೆ ನಡೆಸೋಣ ಎಂದು ಅವರು ಸಲಹೆ ನೀಡಿದರು.