ಹಿಂದಿನ ಕಾಲದಲ್ಲಿ ಪರಿಣಿತ ವೈದ್ಯರ ಸೇವೆ, ಅತ್ಯಾಧುನಿಕ ತಂತ್ರಜ್ಞಾನ ದುರ್ಲಭವಾಗಿತ್ತು. ಬಡತನ, ಅನಕ್ಷರತೆ, ಮಡುಗಟ್ಟಿ ನಿಂತ ಮೂಢನಂಬಿಕೆ, ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ರೋಗ ಪತ್ತೆ ಹಚ್ಚುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗುತ್ತಿತ್ತು. ಈ ಕಾರಣದಿಂದಲೇ ಕ್ಯಾನ್ಸರ್ ಗುಣಪಡಿಸ ಲಾಗದ ಕಾಯಿಲೆ ಎಂಬ ಹಣೆಪಟ್ಟಿ ಪಡೆದುಕೊಂಡಿತ್ತು. ತಂತ್ರಜ್ಞಾನ ಕ್ರಾಂತಿ, ಪರಿಣಿತ ವೈದ್ಯರ ಲಭ್ಯತೆ, ಏರಿದ ಜನರ ತಿಳಿವಳಿಕೆ ಮಟ್ಟದಿಂದ ಕ್ಯಾನ್ಸರ್ ರೋಗ ಮಟ್ಟ ಹಾಕಲು ಇಂದು ಸಾಧ್ಯವಾಗಿದೆ. ಇದು ಗರ್ಭಗೊರಳಿನ ಕ್ಯಾನ್ಸರ್ ವಿಷಯದಲ್ಲಂತೂ ನೂರಕ್ಕೆ ನೂರು ಸತ್ಯ.
ಕ್ಯಾನ್ಸರ್ ರೋಗ ಮನುಕುಲದ ದೊಡ್ಡ ಶತ್ರು. ಅನಾದಿಕಾಲದಿಂದಲೂ ಈ ರೋಗ ಮನುಕುಲವನ್ನು ಕಾಡುತ್ತಿದೆ. ಕ್ಯಾನ್ಸರ್ ಎಂದರೆ ಭಯ. ಕ್ಯಾನ್ಸರ್ ಎಂದರೆ ಸಾವು ಎಂಬ ನಂಬಿಕೆ ಜನರಲ್ಲಿ. ಆದರೆ ಪರಿಸ್ಥಿತಿ ಈಗ ಸಾಕಷ್ಟು ಬದಲಾಗಿದೆ. ವಿಜ್ಞಾನ ನಾಗಾಲೋಟದಿಂದ ಮುನ್ನಡೆಯುತ್ತಿದೆ. ದಿನ ಬೆಳಗಾದರೆ ಹೊಸ ಹೊಸ ಆವಿಷ್ಕಾರಗಳು ಮನುಕುಲದ ಒಳಿತಿಗಾಗಿ ಬರುತ್ತಿವೆ.
ವಿಶ್ವದಾದ್ಯಂತ ಪ್ರತಿ ವರ್ಷ ಫೆಬ್ರವರಿ ೪ರಂದು ವಿಶ್ವ ಕ್ಯಾನ್ಸರ್ ಜಾಗೃತಿ ದಿನ ಎಂದು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಕ್ಯಾನ್ಸರ್ ತಡೆ ಒಕ್ಕೂಟ ಈ ದಿನಾ ಚರಣೆಯನ್ನು ೨೦೦೦ದಿಂದ ಜಾರಿಗೆ ತಂದಿದೆ. ಯುನೆಸ್ಕೊ ಮಹಾನಿರ್ದೆಶಕರು, ಫ್ರೆಂಚ್ ಅಧ್ಯಕ್ಷರಾಗಿದ್ದ ಜಾಕ್ಯುಸ್ ಚಿರಾಗ ಪ್ಯಾರಿಸ್ನಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿದರು. ಹೆಚ್ಚುತ್ತಿರುವ ಕ್ಯಾನ್ಸರ್ ರೋಗ ತಡೆಗಟ್ಟುವುದರ ಬಗ್ಗೆ, ಆರಂಭಿಕ ಹಂತದಲ್ಲಿ ಗುರುತಿಸುವ ಬಗ್ಗೆ ಮತ್ತು ಲಭ್ಯವಿರುವ ಚಿಕಿತ್ಸೆ ಗಳ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿ, ಕ್ಯಾನ್ಸರ್ ರೋಗದ ಬಗೆಗಿನ ತಪ್ಪು ಕಲ್ಪನೆ ಹೋಗಲಾಡಿಸುವ ಮಹದಾಸೆಯನ್ನು ಈ ಆಚರಣೆ ಹೊಂದಿದೆ. ಬಹುತೇಕ ಎಲ್ಲ ಕ್ಯಾನ್ಸರ್‌ಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಪರೀಕ್ಷೆಗಳು ಇಂದು ಲಭ್ಯವಾಗಿವೆ. ಕ್ಯಾನ್ಸರ್ ರೋಗ ಕೂಡಾ ಗೆಲ್ಲಲು ಸಾಧ್ಯವಿದೆ ಎಂಬ ಧನಾತ್ಮಕ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಗುರುತರವಾದ ಗುರಿಯನ್ನು ಈ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಹೊಂದಿದೆ.
ಕ್ಯಾನ್ಸರ್ ಪ್ರತಿ ವರ್ಷ ೨೦ ಮಿಲಿಯನ್ ಹೊಸ ರೋಗಿಗಳ ಉಡುಗೊರೆಯನ್ನು ಜಗತ್ತಿಗೆ ನೀಡುತ್ತಿದೆ. ಸದ್ಯ ಪ್ರತಿ ವರ್ಷ ೧೦ ಮಿಲಿಯನ್ ರೋಗಿಗಳ ಪ್ರಾಣ ಪಕ್ಷಿ ತೆಗೆಯುವ ಕ್ಯಾನ್ಸರ್ ೨೦೩೦ರ ವೇಳೆಗೆ ೧೩ ಮಿಲಿಯನ್ ರೋಗಿಗಳನ್ನು ನುಂಗಿ ನೀರು ಕುಡಿಯಲಿದೆ. ೧೦% ರೋಗಿಗಳು ಆನುವಂಶಿಕ ರೂಪಾಂತರ ದಿಂದಾಗಿ ಮತ್ತು ೨೭% ಕ್ಯಾನ್ಸರ್ ಸಾವುಗಳು ತಡೆಹಿಡಿಯಬಹುದಾದ ಕಾರಣಗಳಿಂದ ಸಂಭವಿಸುವವು. ಅವುಗಳೆಂದರೆ, ತಂಬಾಕು ಸೇವನೆ ಮತ್ತು ಮದ್ಯ ಪಾನ. ಭಾರತದಲ್ಲಿ ಪುಪ್ಪುಸ ಮತ್ತು ಸ್ತನಗಳಲ್ಲಿ ಉಂಟಾಗುವ ಕ್ಯಾನ್ಸರ್ ಅಗ್ರಸ್ಥಾನ ಪಡೆದಿದ್ದು, ರೋಗನಿದಾನ ಮಾಡಿದಾಗ ೫೭% ಸ್ತನ ಕ್ಯಾನ್ಸರ್, ೬೦% ಸರ್ವೈಕಲ್ ಕ್ಯಾನ್ಸರ್, ೬೬.೬% ತಲೆ ಮತ್ತು ಕತ್ತಿನ ಕ್ಯಾನ್ಸರ್, ೫೦.೮% ಹೊಟ್ಟೆಯ ಕ್ಯಾನ್ಸರ್ ಮುಂದುವರಿದ ಹಂತದಲ್ಲಿ ಇರುತ್ತವೆ. ೨೦೨೦ರಲ್ಲಿಯ ಹಾವಳಿಗಿಂತ ೧೨.೮% ಕ್ಯಾನ್ಸರ್ ಹಾವಳಿ ೨೦೨೫ರಲ್ಲಿ ಹೆಚ್ಚಾಗಿರುವುದು ಅಧ್ಯಯನಗಳಿಂದ ಕಂಡು ಬಂದಿದೆ. ಈಗ ಕ್ಯಾನ್ಸರ್ ಅನ್ನು ಜೀವನ ಶೈಲಿಯ ರೋಗ ಎಂದು ಪರಿಗಣಿಸಲಾಗಿದೆ.
ಕ್ಯಾನ್ಸರ್ ಅಂದರೆ ಸಾವಲ್ಲ
ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಗಳ ಪಟ್ಟಿಯಲ್ಲಿ ೨ನೆಯ ಅಗ್ರಸ್ಥಾನವನ್ನು (ಮೊದಲನೆ ಸ್ಥಾನ ಹೃದಯಾಘಾತ ) ಅಲಂಕರಿಸಿದೆ. ಈ ಭಯಾನಕ ಕಾಯಿಲೆಗೆ ತುತ್ತಾದ ರೋಗಿ ಮಾನಸಿಕವಾಗಿ, ದೈಹಿಕವಾಗಿ ತೀವ್ರವಾಗಿ ಕುಗ್ಗುತ್ತಾನೆ. ತಂತ್ರಜ್ಞಾನ ಕ್ರಾಂತಿ, ಪರಿಣಿತ ವೈದ್ಯರ ಲಭ್ಯತೆ, ಏರಿದ ಜನರ ತಿಳಿವಳಿಕೆ ಮಟ್ಟದಿಂದ ಕ್ಯಾನ್ಸರ್ ರೋಗ ಮಟ್ಟ ಹಾಕಲು ಇಂದು ಸಾಧ್ಯವಾಗಿದೆ. ಇದು ಗರ್ಭಗೊರಳಿನ ಕ್ಯಾನ್ಸರ್ ವಿಷಯದಲ್ಲಂತೂ ನೂರಕ್ಕೆ ನೂರು ಸತ್ಯ.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಷ್ಟೇ ಅಲ್ಲ, ಸಂಪದ್ಭರಿತ ಮುಂದುವರೆದ ರಾಷ್ಟ್ರಗಳಲ್ಲೂ, ಮಾಯವಾಗಿದ್ದ ಸೋಂಕು ರೋಗಗಳ ಪುನರಾಗಮನವಾಗಿ ಅವು ಜನಾರೋಗ್ಯ ಸಮಸ್ಯೆಗಳಾಗುವ ಸಂಭವ ಇರುವಂತೆಯೇ, ಇಂದು ಅಸಾಂಕ್ರಾಮಿಕ ರೋಗಗಳ ಅಟ್ಟಹಾಸ ಹೆಚ್ಚುತ್ತಿದೆ. ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ. ಕ್ಯಾನ್ಸರ್ ರೋಗದ ವಿರುದ್ಧದ ಲಸಿಕೆಯ ಬಳಕೆಯಲ್ಲಿ ಕಂಡು ಬಂದಿರುವ ಯಶಸ್ಸು ಕಡಿಮೆ ಪ್ರಮಾಣದ್ದು ಆದರೂ, ಪ್ರಯತ್ನಗಳು ಅವ್ಯಾಹತ ವಾಗಿ ಮುಂದುವರೆದಿವೆ. ಇಂದು ಗರ್ಭಗೊರಳಿನ ಕ್ಯಾನ್ಸರ್ಗೆ ಕಡಿವಾಣ ಹಾಕುವ ಲಸಿಕೆ ಲಭ್ಯವಾಗಿದೆ. ಎಚ್ಪಿವಿ ಮೂಲಕ ಗರ್ಭಗೊರಳಿನ ಕ್ಯಾನ್ಸರ್ ಉಂಟು ಮಾಡುವ ಸೋಂಕನ್ನು ತಡೆಯಲು ಒಂದು ಲಸಿಕೆ ಅಭಿವೃದ್ಧಿಪಡಿಸಲಾಗಿದೆ.
ಬಹಳಷ್ಟು ಕ್ಯಾನ್ಸರ್‌ಗಳಂತೆ ಗರ್ಭಕೋಶದ ಕ್ಯಾನ್ಸರ್ ಪತ್ತೆಯಾಗುವವರೆಗೂ ಯಾವುದೇ ಸೂಚನೆ ನೀಡುವುದಿಲ್ಲ. ಮಹಿಳೆಯರನ್ನು ಹೆಚ್ಚು ಕಾಡುವ ಕ್ಯಾನ್ಸರ್‌ಗಳಲ್ಲಿ ಇದು ನಾಲ್ಕನೆಯ ಸ್ಥಾನದಲ್ಲಿದೆ. ಶೇ.೯೯ರಷ್ಟು ಪ್ರಕರಣಗಳಲ್ಲಿ ಲೈಂಗಿಕ ಸಂಪರ್ಕದಿಂದ ಹರಡುವ ಎಚ್ಪಿವಿ(ಹ್ಯೂಮನ್ ಪ್ಯಾಪಿಲೋಮ ವೈರಸ್) ಯಿಂದ ಈ ಕ್ಯಾನ್ಸರ್ ಉಂಟಾಗುತ್ತದೆ. ಕಿಬ್ಬೊಟ್ಟೆಯಲ್ಲಿ ನೋವು, ಯೋನಿಯ ಮೂಲಕ ಸತತ ನೀರಿನಂತಹ ಸೋರಿಕೆ ಕಂದು ಅಥವಾ ಕೆಂಪು ಬಣ್ಣದ್ದಿರ ಬಹುದು. ಕೆಲವೊಮ್ಮೆ ಕೆಟ್ಟ ವಾಸನೆ ಬರಬಹುದು. ಋತುಚಕ್ರಗಳ ನಡುವೆ ಅಸಹಜ ರಕ್ತಸ್ರಾವ, ಸಂಭೋಗದ ಸಂದರ್ಭ ಅಥವಾ ನಂತರ ರಕ್ತಸ್ರಾವ ಸಂಭವಿಸ ಬಹುದು. ಹರ್ಪಿಸ್ ಅಥವಾ ಎಚ್ಪಿವಿ ನಂತರ ಉಂಟಾಗುವ ಸೋಂಕು ಗರ್ಭಗೊರಳಿನ ಕ್ಯಾನ್ಸರ್‌ಗೆ ಕಾರಣವಾಗಬಹುದು. ಇಂತಹ ಮುನ್ಸೂಚನೆಗಳು ಕಂಡುಬಂದ ಸ್ತ್ರೀಯರಿಗೆ ಎಚ್ಪಿವಿ ಡಿಎನ್ಎ ಪರೀಕ್ಷೆ ನಡೆಸಿದರೆ ಈ ರೋಗದ ಬೆಳವಣಿಗೆ ಕುರಿತು ವಿಶ್ವಾಸಾರ್ಹ ಮಾಹಿತಿ ದೊರೆಯುತ್ತದೆ.
ಗರ್ಭಗೊರಳಿನ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಅಥವಾ ಕಿಮೊ- ರೇಡಿಯೋ ಥೆರಪಿಗಳಿಲ್ಲದೆ ನಿಯಂತ್ರಿಸಬಹುದಾದ ರೋಗ. ಪ್ರಾಥಮಿಕ ನಿಯಂತ್ರಣ ಕ್ರಮಗಳೆಂದರೆ ವ್ಯಾಕ್ಸಿನೇಶನ್ ಮತ್ತು ಸಾಮಾಜಿಕ ಶಿಕ್ಷಣ ಎಚ್ಪಿವಿ ಸೋಂಕಿಗೆ ತೆರೆದುಕೊಳ್ಳುವ ಸಾಧ್ಯತೆ ಕಡಿಮೆಗೊಳಿಸುವುದು ಮತ್ತು ಲೈಂಗಿಕವಾಗಿ ಹರಡುವ ರೋಗಗಳನ್ನು ಕಾಂಡೋಮ್ ಬಳಕೆಯಿಂದ ತಡೆಯುವುದು. ಆದರೆ ಕಾಂಡೋಮ್ ಬಳಕೆ ಎಚ್ಪಿವಿ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸುವುದಿಲ್ಲ. ರೋಗ ವೃದ್ಧಿಯಾಗುವ ಮುನ್ನ ಚಿಕಿತ್ಸೆ ಪಡೆಯುವುದು. ಅದಕ್ಕೆ ಸರ್ವೈಕಲ್ ಸೈಟಾಲಾಜಿ ಅಥವಾ ಎಚ್ಪಿವಿ ಪರೀಕ್ಷೆ ರೋಗ ನಿರ್ಧರಿಸಲು ಅಗತ್ಯ.
ಭಾರತದಲ್ಲಿ ಗರ್ಭಗೊರಳಿನ ಕ್ಯಾನ್ಸರ್‌ನಿಂದ ಉಂಟಾಗುವ ಮರಣ ಸಂಖ್ಯೆ ಕಳೆದ ಹತ್ತು ವರ್ಷಗಳಿಂದ ಕಡಿಮೆಯಾಗಿದೆ. ಇದಕ್ಕೆ ಮುಖ್ಯಕಾರಣ ಕ್ಯಾನ್ಸರ್ ಪೂರ್ವ ಹಂತದಲ್ಲಿ ಗರ್ಭಗೊರಳಿನ ಪರೀಕ್ಷೆ ನಡೆಸಿ ಅದರಲ್ಲಿ ಆಗುವ ಬದಲಾವಣೆಗಳನ್ನು ಪತ್ತೆ ಮಾಡುತ್ತಿರುವುದು. ಅಸಹಜ ಜೀವಕೋಶಗಳನ್ನು ಮುಂಚೆಯೇ ಪತ್ತೆ ಮಾಡಿದರೆ ಕ್ಯಾನ್ಸರ್ ನಿಯಂತ್ರಣ ಅಥವಾ ಚಿಕಿತ್ಸೆ ನೀಡಬಹುದು. ಎಚ್ಪಿವಿ ವಿರುದ್ಧ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದ್ದರೂ, ರೋಗ ಪರೀಕ್ಷೆ ಬಹಳ ಮುಖ್ಯವಾದದ್ದು ಎಂಬುದನ್ನು ಮರೆಯುವಂತಿಲ್ಲ.
ಈಗ ಈ ಕ್ಯಾನ್ಸರ್‌ಗೆ ಲಸಿಕೆ ಬಂದಿದೆ. ಅಮೆರಿಕ, ಯುರೋಪ್ ಹಾಗೂ ಕೆಲವು ಏಷ್ಯನ್ ರಾಷ್ಟ್ರಗಳಲ್ಲೂ ಈ ಲಸಿಕೆ ಪ್ರಚಲಿತವಿದೆ. ಈ ಲಸಿಕೆ ಭಾರತದ ಮಾರುಕಟ್ಟೆಯನ್ನೂ ಪ್ರವೇಶಿಸಿದೆ. ಹುಡುಗಿಗೆ ೯ ವರ್ಷದ ನಂತರ ಈ ಲಸಿಕೆ ನೀಡಬಹುದು. ೬ ತಿಂಗಳ ಅವಧಿಯಲ್ಲಿ ೩ ಡೋಸ್ಗಳಲ್ಲಿ ಈ ಲಸಿಕೆ ನೀಡಲಾಗುತ್ತದೆ. ಲೈಂಗಿಕ ಚಟುವಟಿಕೆ ಆರಂಭಕ್ಕೆ ಮುಂಚೆ ನೀಡಿದರೆ ಇದು ಹೆಚ್ಚು ಪರಿಣಾಮಕಾರಿ ಎಂದು ಸ್ತ್ರೀರೋಗ ತಜ್ಞರು ಹೇಳುತ್ತಾರೆ. ಲಸಿಕೆ ಹಾಕಿಸಿಕೊಂಡರೂ, ಮಹಿಳೆಯರು ಪ್ಯಾಪ್ ಸ್ಮಿಯರ್| ಎಚ್ಪಿವಿ- ಡಿಎನ್ಎ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಪ್ಯಾಪ್ ಸ್ಮಿಯರ್ ಪರೀಕ್ಷೆಯನ್ನು ೨೧ ವರ್ಷಕ್ಕಿಂತ ಮೇಲ್ಪಟ್ಟ, ಲೈಂಗಿಕವಾಗಿ ಸಕ್ರಿಯವಾಗಿ ಇರುವ ಮಹಿಳೆಯರಲ್ಲಿ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ೬೫ ವರ್ಷ ವಯಸ್ಸಿನವರೆಗೂ ಮಾಡಿಸಬೇಕಾಗುತ್ತದೆ. ಇದೇ ರೀತಿ ೫ ವರ್ಷಗಳಿಗೊಮ್ಮೆ ಎಚ್ಪಿವಿ- ಡಿಎನ್ಎ ಪರೀಕ್ಷೆ ಸಹ ಮಾಡಿಸಬಹುದು.
ದೇಶದ ಕಡುಬಡವರಿಗೆ ಲಸಿಕೆಯ ವೆಚ್ಚ ಭರಿಸುವುದು ದುಸ್ತರವಾಗಿತ್ತು. ಈ ಲಸಿಕೆಯನ್ನು ಇಂಧ್ರ ಧನುಷ್ ಯೋಜನೆಯ ಮೂಲಕ ಯು.ಎನ್.ಯೋಜನೆಯಡಿ ನೀಡಿ ಗರ್ಭಗೊರಳಿನ ಕ್ಯಾನ್ಸರ್ ತಡೆಗೆ ಸಮರ ಸಾರಿರುವುದು ಸೂಕ್ತ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಬಂಧಿಸಬಹುದಾದ, ಮಹಿಳೆಯರನ್ನು ಕಾಡುವ ಗರ್ಭಗೊರಳಿನ ಕ್ಯಾನ್ಸರ್‌ನತ್ತ ಗಮನ ಹರಿಸಿರುವುದೊಂದು ಆರೋಗ್ಯಕರ ಬೆಳವಣಿಗೆ. ಇದು ವಿಕಸಿತ ಭಾರತದ ಆಧಾರಸ್ತಂಭಗಳಬ್ಬರಾದ ಮಹಿಳೆಯರಿಗೆ ನೀಡಿದ ಅಮೂಲ್ಯ ಉಡುಗೊರೆ.
ಕ್ಯಾನ್ಸರ್ ಈಗ ಗೆಲ್ಲುವ ಕಾಯಿಲೆಯಾಗುತ್ತಿದೆ. ಮೊದಲ ಹೆಜ್ಜೆಯಾಗಿ ಗರ್ಭಗೊರಳಿನ ಕ್ಯಾನ್ಸರಿಗೆ ಲಸಿಕೆ ಬಂದಿದೆ. ಮುಂಬರುವ ದಿನಗಳಲ್ಲಿ ವೈದ್ಯವಿಜ್ಞಾನಿಗಳ ಪರಿಶ್ರಮದಿಂದ ಎಲ್ಲ ಕ್ಯಾನ್ಸರಿಗೂ ಕಡಿವಾಣ ಹಾಕಲು ಸಾಧ್ಯವಾಗಬಹುದು.
– ಡಾ.ಕರವೀರಪ್ರಭು ಕ್ಯಾಲಕೊಂಡ
ಲೇಖಕರು, ವಿಶ್ರಾಂತ ಶಸ್ತ್ರಚಿಕಿತ್ಸಕರು
ಮೊ: 9448036207 .