Menu

ಎಲ್‌ಪಿಜಿಗೆ ಇಥೆನಾಲ್ ಪರ್ಯಾಯ ಆಗಬಹುದೇ?

ಯುದ್ಧದ ಪರಿಣಾಮ ಎಲ್‌ಪಿಜಿ ಕೊರತೆ ಕಂಡು ಬಂದಿದೆ. ವಾಣಿಜ್ಯ ಎಲ್‌ಪಿಜಿ ಬಂದ್ ಆಗಿದೆ. ಕೆಲವು ಕಡೆ ಹೊಟೇಲ್‌ಗಳು ಮುಚ್ಚಿವೆ. ಈ ಪರಿಸ್ಥಿತಿ ಎಂದು ಬದಲಾಗುತ್ತದೆ ಎಂಬುದು ಯಾರಿಗೂ ತಿಳಿಯದು. ಇದಕ್ಕೆ ಪ್ರತಿಭಟನೆ ಪರಿಹಾರವಲ್ಲ. ಈಗ ಇದಕ್ಕೆ ಪರ್ಯಾಯವಾಗಿ ಇಥೆನಾಲ್ ಬಳಸುವ ಪ್ರಯೋಗಗಳು ನಡೆಯುತ್ತಿದೆ. ಕಬ್ಬು ಅರೆದಾಗ ಕಾಕಂಬಿಯ ಮೂಲಕ ಇಥೆನಾಲ್ ಪಡೆಯಬಹುದು. ಇದು ಎಲ್‌ಪಿಜಿ ರೀತಿ ಸ್ಫೋಟದ ವಸ್ತುವಲ್ಲ. ಇದನ್ನು ಉರಿಸಿದಾಗ ಇಂಗಾಲಾಮ್ಲ ಹೊರಬರುವುದಿಲ್ಲ. ಇದು ಜೈವಿಕ ಇಂಧನವಾಗಿರುವುದರಿಂದ ಬಳಸುವುದರಿಂದ ಸಮಸ್ಯೆ ಏನೂ ಆಗುವುದಿಲ್ಲ. ಈಗ ಡೀಸೆಲ್ ಜತೆ ಶೇ.೨೦ ರಷ್ಟು ಇಥೆನಾಲ್ ಮಿಶ್ರಣ ಮಾಡಲು ಕೇಂದ್ರ ಒಪ್ಪಿಗೆ ನೀಡಿದೆ.

ಇದುವರೆಗೆ ಇಥೆನಾಲ್ ಅಬ್ಕಾರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಇದನ್ನು ಇಂಧನ ಇಲಾಖೆ ವ್ಯಾಪ್ತಿಗೆ ತಂದರೆ ರೈತರಿಗೆ ಉತ್ತಮ ಆದಾಯ ತಂದು ಕೊಡಲಿದೆ. ನಮ್ಮಲ್ಲಿ ಒಟ್ಟು ೧೯೯೦ ಕೋಟಿ ಲೀಟರ್ ಇಥೆನಾಲ್ ಲಭ್ಯ. ಕರ್ನಾಟಕದಲ್ಲಿ ೨೭೦ ಕೋಟಿ ಲೀಟರ್ ಇಥೆನಾಲ್ ಉತ್ಪಾದನೆಯಾಗುತ್ತದೆ. ಇಥೆನಾಲ್ ಸ್ಟೌವ್ ೮೦೦-೧೦೦೦ ರೂಗಳಲ್ಲಿ ಲಭ್ಯ. ಇಥೆನಾಲ್ ದ್ರವರೂಪ ಪಡೆಯುವುದರಿಂದ ಅದನ್ನು ಸಾಗಿಸುವುದು ಕಷ್ಟವೇನಲ್ಲ. ಅಲ್ಲದೆ ಹೆಚ್ಚು ಭಾರವಲ್ಲದ ದ್ರವ. ಹೀಗಾಗಿ ಸುಲಭವಾಗಿ ಬಳಸಬಹುದು.

ರಾಜ್ಯದಲ್ಲಿ ೧.೯ ಕೋಟಿ ಎಲ್‌ಪಿಜಿ ಬಳಕೆದಾರರು ಇದ್ದಾರೆ. ಅವರಿಗೆ ಇಥೆನಾಲ್ ಪರ್ಯಾಯ ಇಂಧನವಾಗಿ ನೀಡಬಹುದು. ಇದು ನಮ್ಮಲ್ಲೇ ಲಭಿಸುವುದರಿಂದ ವಿದೇಶಿ ವಿನಿಮಯದ ಸಮಸ್ಯೆ ಬರುವುದಿಲ್ಲ. ಅಲ್ಲದೆ ಯುದ್ಧ ನಡೆದರೂ ಚಿಂತೆ ಇರುವುದಿಲ್ಲ.೧೪.೨ ಕೆಜಿ ಎಲ್‌ಪಿಜಿಗೆ ಸಮಾನ ಎಂದರೆ ೧೮ ಲೀಟರ್ ಇಥೆನಾಲ್ ಬೇಕು. ಇದರ ದರ ೧೨೮೦-೧೩೦೦ ರೂ. ಆಗುತ್ತದೆ. ಕೇಂದ್ರ ಎಲ್‌ಪಿಜಿಗೆ ನೀಡುವ ಸಹಾಯಧನವನ್ನು ಇದಕ್ಕೂ ನೀಡಿದರೆ ದರವನ್ನು ಇಳಿಸಬಹುದು. ಇದೇರೀತಿ ವಿದ್ಯುತ್ ಇಂಡಕ್ಷನ್ ಸ್ಟೌ ಬಳಸಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಗೋಬರ್ ಅನಿಲ ಬಳಸಬಹುದು. ಅದೂ ಕೂಡ ಕಡಿಮೆ ದರದಲ್ಲಿ ಲಭ್ಯ. ಇವುಗಳು ನಮ್ಮನ್ನು ಸ್ವಾವಲಂಬಿ ಮಾಡುತ್ತವೆ.

ನಮ್ಮ ದೇಶಕ್ಕೆ ಒಟ್ಟು ೨೦ ಲಕ್ಷ ಟನ್ ಎಲ್ಪಿಜಿ ಬೇಕು. ಪ್ರತಿ ತಿಂಗಳೂ ೪೦ ಬೃಹತ್ ಅನಿಲವಾಹಕ ಹಡಗುಗಳು ಬರಬೇಕು. ಈಗ ಇದು ೨೦ಕ್ಕೆ ಇಳಿದಿದೆ. ಸಾಮಾನ್ಯವಾಗಿ ಶೇ.೬೨ ರಷ್ಟು ಬೇಡಿಕೆಯನ್ನು ವಿದೇಶಿ ಅನಿಲ ಪೂರೈಕೆಯಿಂದ ಈಡೇರಿಸಲಾಗುತ್ತಿದೆ. ನಮಗೆ ಯುಎಇ, ಸೌದಿ ಅರೇಬಿಯಾ, ಕುವೈತ್‌ನಿಂದ ಅತಿ ಹೆಚ್ಚು ಅಡುಗೆ ಅನಿಲ ಬರುವುದು. ಈಗ ಎಲ್ಲವೂ ಸ್ಥಗಿತಗೊಂಡಿದೆ. ಅಮೆರಿಕ, ನೈಜೀರಿಯಾ, ನಾರ್ವೆ, ಅಲ್ಜಿರಿಯಾದಿಂದ ಖರೀದಿ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ದೂರದ ದೇಶಗಳಾಗಿದ್ದರಿಂದ ಬರುವುದು ವಿಳಂಬ. ಸ್ವದೇಶಿ ತಯಾರಿಕೆ ಘಟಕಗಳಲ್ಲಿ ಶೇ.೧೦ ರಷ್ಟು ಹೆಚ್ಚು ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈಗ ವಾಣಿಜ್ಯ ಬಳಕೆ ಅನಿಲ ಪೂರೈಕೆ ಸ್ಥಗಿತಗೊಂಡಿರುವುದರಿಂದ ಪ್ರತಿದಿನ ೧೨೦೦ ಕೋಟಿ ರೂ. ನಷ್ಟ. ಮನೆಬಳಕೆಗೆ ಅನಿಲ ಪೂರೈಕೆಗೆ ಸರ್ಕಾರ ಆದ್ಯತೆ ನೀಡಿದೆ.

ಗ್ರಾಮೀಣ ಪ್ರದೇಶದಲ್ಲಿ ಎಲ್‌ಪಿಜಿ ಬಳಸಿದ್ದರಿಂದ ಗಿಡಮರಗಳನ್ನು ರಕ್ಷಿಸಲು ಸಾಧ್ಯವಾಯಿತು. ಈಗ ಎಲ್‌ಪಿಜಿ ಕೊರತೆಯಿಂದ ಜನ ಸೌದೆ ಒಲೆಗೆ ತಿರುಗಿದರೆ ಕಷ್ಟ. ಎಲ್‌ಪಿಜಿಗೆ ಪರ್ಯಾಯ ಹುಡುಕಬಹುದು. ಆದರೆ ಗಿಡ ಮರ ಬೆಳೆಸುವುದು ಕಷ್ಟ. ಅದರಿಂದ ಇಥೆನಾಲ್ ಮತ್ತು ವಿದ್ಯುತ್ ಆಧರಿತ ಒಲೆಗಳನ್ನು ಹೆಚ್ಚು ಬಳಸುವುದು ಇಂದಿನ ಸಂದರ್ಭದಲ್ಲಿ ಪರ್ಯಾಯ. ಜಾಗತಿಕ ಮಟ್ಟದಲ್ಲಿ ಆಗುವ ಬದಲಾವಣೆಗಳಿಗೆ ದೇಶದ ಆರ್ಥಿಕರಂಗ ಬಲಿಯಾಗಬಾರದು. ಅದಕ್ಕೆ ನಾವು ಬಳಸುವ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುವುದು ಅಗತ್ಯ. ಇದು ಯುದ್ಧ ಕಲಿಸಿದ ಪಾಠ.

Related Posts

Leave a Reply

Your email address will not be published. Required fields are marked *