ಆಸ್ಟ್ರೇಲಿಯಾದ ಆಲ್ ರೌಂಡರ್ ಕೆಮರೂನ್ ಗ್ರೀನ್ ಐಪಿಎಲ್ ಟಿ-20ಯ ಮಿನಿ ಹರಾಜಿನಲ್ಲಿ ಅತ್ಯಂತ ದುಬಾರಿ ವಿದೇಶೀ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಅಬುಧಾಬಿಯಲ್ಲಿ ಮಂಗಳವಾರ ನಡೆದ ಮಿನಿ ಹರಾಜಿನಲ್ಲಿ ಕೆಮರೂನ್ ಗ್ರೀನ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ 25.20 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ ಕೆಮರೂನ್ ನಿರೀಕ್ಷೆಯಂತೆ ದೊಡ್ಡ ಮೊತ್ತ ಜೇಬಿಗಿಳಿಸಿಕೊಂಡಿದ್ದಾರೆ.
ಕೆಮರೂನ್ ಗ್ರೀನ್ ಗಾಗಿ ಕೆಕೆಆರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಪಟ್ಟು ಬಿಡದ ಬಾಲಿವುಡ್ ನಟ ಶಾರೂಖ್ ಖಾನ್ ಒಡೆತನದ ಕೆಕೆಆರ್ ಕೆಮರೂನ್ ಗ್ರೀನ್ ಅವರನ್ನು ದೊಡ್ಡ ಮೊತ್ತಕ್ಕೆ ಪಡೆಯುವಲ್ಲಿ ಯಶಸ್ವಿಯಾಯಿತು.
ಐಪಿಎಲ್ ಚಾಂಪಿಯನ್ ಆರ್ ಸಿಬಿ ತಂಡದ ಪರ ಆಡಿದ್ದ ಕೆಮರೂನ್ ಗ್ರೀನ್ ಅವರನ್ನು ಸೆಳೆಯುವಲ್ಲಿ ಕೆಕೆಆರ್ ಯಶಸ್ವಿಯಾಗಿದೆ. ಈ ಹಿಂದೆ ಮಿಚೆಲ್ ಸ್ಟಾರ್ಕ್ 24.5 ಕೋಟಿಗೆ ಮಾರಾಟವಾಗಿದ್ದು, ಇದುವರೆಗಿನ ಅತೀ ದೊಡ್ಡ ಮೊತ್ತ ಪಡೆದ ವಿದೇಶೀ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದರು. ಇದೀಗ ಕೆಮರೂನ್ ಈ ದಾಖಲೆ ಮುರಿದಿದ್ದಾರೆ.
ಹರಾಜಿನಲ್ಲಿ ಆರ್ ಸಿಬಿ ತಂಡ ಕೈಬಿಟ್ಟ ಲಿಯಾಮ್ ಲಿವಿಂಗ್ ಸ್ಟೋನ್, ಪೃಥ್ವಿ ಶಾ, ಸರ್ಫಾರಾಜ್ ಖಾನ್ ಮಾರಾಟವಾಗದೇ ಅನ್ ಸೋಲ್ಡ್ ಆದರೆ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್ ಮೂಲಧನ 2 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು.


