100 ರೂಪಾಯಿಯ ಬೆಳ್ಳಿಯ ವಸ್ತು ಖರೀದಿಸುವ ನೆಪದಲ್ಲಿ ಬಂದವರು 2.28 ಲಕ್ಷ ರೂಪಾಯಿ ಮೌಲ್ಯದ 28 ಗ್ರಾಂ ಚಿನ್ನಾಭರಣ ಕದ್ದೊಯ್ದ ಘಟನೆ ಚಾಮರಾಜಪೇಟೆಯ ರುದ್ರಪ್ಪ ಗಾರ್ಡನ್ ಬಳಿಯ ಚಾಮುಂಡ ಜ್ಯುವೆಲರ್ಸ್‌ನಲ್ಲಿ ನಡೆದಿದೆ.
ಈ ಘಟನೆಯ ಸಂಪೂರ್ಣ ಕೃತ್ಯವು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಚಾಮುಂಡ ಜ್ಯುವೆಲರ್ಸ್‌ಗೆ ಬಂದ ಇಬ್ಬರು ವ್ಯಕ್ತಿಗಳು ಮೊದಲಿಗೆ 100 ರೂಪಾಯಿಯ ಬೆಳ್ಳಿಯ ವಸ್ತುವನ್ನು ಖರೀದಿಸಿದರು. 200 ರೂಪಾಯಿ ನೀಡಿ 100 ರೂಪಾಯಿ ಚಿಲ್ಲರೆ ವಾಪಸ್ ಪಡೆದರು.
ಆನಂತರ 500 ರೂಪಾಯಿಯ ಚಿಲ್ಲರೆ ಕೇಳುವ ನೆಪದಲ್ಲಿ ಅಂಗಡಿ ಮಾಲೀಕನ ಗಮನವನ್ನು ವಿಚಲಿತಗೊಳಿಸಿದರು. ಈ ಅವಕಾಶವನ್ನು ಬಳಸಿಕೊಂಡು 28 ಗ್ರಾಂ ಚಿನ್ನಾಭರಣ (2.28 ಲಕ್ಷ ರೂ. ಮೌಲ್ಯ) ಕದ್ದು ಪರಾರಿಯಾಗಿದ್ದರು. ಕಳ್ಳರು ಅಂಗಡಿಯಿಂದ ಹೊರಟ ನಂತರ ಚಿನ್ನಾಭರಣ ಕಾಣೆಯಾಗಿರುವುದು ಮಾಲೀಕರ ಗಮನಕ್ಕೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬೆಳ್ಳಿಯ ವಸ್ತು ಖರೀದಿಸಲು ಬಂದಿದ್ದ ಇಬ್ಬರು ವ್ಯಕ್ತಿಗಳೇ ಚಿನ್ನ ಕದ್ದಿರುವುದು ಸ್ಪಷ್ಟವಾಗಿದೆ. ಈ ದೃಶ್ಯಾವಳಿಗಳ ಆಧಾರದಲ್ಲಿ ಅಂಗಡಿ ಮಾಲೀಕರು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಚಾಮರಾಜಪೇಟೆ ಪೊಲೀಸರು ಕಳ್ಳರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕಳ್ಳರ ಗುರುತನ್ನು ಪತ್ತೆಹಚ್ಚಲು ಸಮೀಪದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.