Wednesday, January 21, 2026
Menu

ವಿಶೇಷ ಅಧಿವೇಶನ ಕರೆದು ಕೇಂದ್ರದ ಯೋಜನೆಗೆ ಅಡ್ಡಗಾಲು: ಪ್ರತಿಪಕ್ಷ ನಾಯಕ ಆರ್.ಅಶೋಕ

ashoka

ಬೆಂಗಳೂರು: ಕಾಂಗ್ರೆಸ್ ಸರ್ಕಾರ ವಿಶೇಷ ಅಧಿವೇಶನ ಕರೆದು ಕೇಂದ್ರ ಸರ್ಕಾರಿ ಯೋಜನೆಗೆ ಅಡ್ಡಗಾಲು ಹಾಕಲು ಪ್ರಯತ್ನ ಮಾಡಿದೆ. ಆದರೆ ಯೋಜನೆಯ ವಿರುದ್ಧದ ನಿರ್ಣಯದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ವಿಶೇಷ ಅಧಿವೇಶನ ಕರೆದು ಕೇಂದ್ರ ಸರ್ಕಾರಿ ಯೋಜನೆಗೆ ಅಡ್ಡಗಾಲು ಹಾಕಲು ಪ್ರಯತ್ನ ಮಾಡಿದೆ. ವಿಬಿ ಜಿ ರಾಮ್ ಜಿ ಯೋಜನೆಯ ವಿರುದ್ಧ ನಿರ್ಣಯ ಕೈಗೊಂಡು ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಈ ಯೋಜನೆಯಲ್ಲಿ ನಿಜವಾದ ಫಲಾನುಭವಿಗಳಿಗೆ ಕೂಲಿ ಸಿಗುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದರು.

ಉದ್ಯೋಗ ಖಾತರಿ ಯೋಜನೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ. ಇದು ಸಿಎಜಿ ವರದಿಯಲ್ಲೂ ಸಾಬೀತಾಗಿದೆ. ಹೊಸ ಯೋಜನೆಯಲ್ಲಿ ಪಾರದರ್ಶಕತೆ ಹೆಚ್ಚಿರುವುದರ ಜೊತೆಗೆ, ಕೇಂದ್ರ 60% ಹಾಗೂ ರಾಜ್ಯ 40% ಅನುದಾನ ನೀಡುವ ವ್ಯವಸ್ಥೆ ತಂದು ಅನುದಾನವನ್ನು ಹೆಚ್ಚಿಸಲಾಗಿದೆ. ಯೋಜನೆ ಕುರಿತು ತಿಳಿಯಲು ಹಾಗೂ ಅರಿವು ಮೂಡಿಸಲು ಎಲ್ಲ ಶಾಸಕರು, ಮುಖಂಡರ ಜೊತೆ ಸಭೆ ನಡೆಯಲಿದೆ. ಈ ಬಗ್ಗೆ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಈ ಕುರಿತು ಪತ್ರ ಬರೆದಿದ್ದೇನೆ. ಯೋಜನೆ ಕುರಿತ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುತ್ತೇನೆ ಎಂದಿದ್ದಾರೆ. ಹಾಗೆಯೇ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರೂ ಬರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಯೋಜನೆಯ ಬಗ್ಗೆ ವಿವರಿಸಲಾಗುತ್ತದೆ. ಅಧಿವೇಶನಕ್ಕೂ ಮೊದಲು ಕಾರ್ಯಕ್ರಮ ನಡೆಸಿ ಯೋಜನೆ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರಕ್ಕೆ ಅಧಿವೇಶನ ನಡೆಸುವ ಅಗತ್ಯವಿರಲಿಲ್ಲ. ನೇರವಾಗಿ ಸಚಿವರನ್ನು ಅಥವಾ ಪ್ರಧಾನಿಯನ್ನು ಭೇಟಿ ಮಾಡಬಹುದಿತ್ತು. ಈ ನಿರ್ಣಯದಿಂದ ಮಾಧ್ಯಮಗಳಿಗೆ ಸಂದೇಶ ನೀಡಬಹುದೇ ಹೊರತು ಆಡಳಿತಾತ್ಮಕವಾಗಿ ಪ್ರಯೋಜನವಾಗುವುದಿಲ್ಲ. ಕಾಂಗ್ರೆಸ್ ನವರು ಗ್ಯಾರಂಟಿ ಜಾರಿ ಮಾಡಿರುವುದಕ್ಕೆ ಬಿಜೆಪಿಯಿಂದ ಖಂಡನಾ ನಿರ್ಣಯ ಮಾಡಿಲ್ಲ. ಕೇಂದ್ರ ಸರ್ಕಾರ ನಿಯಮ ಪ್ರಕಾರ ಹೊಸ ಯೋಜನೆ ತಂದಿದೆ. ಆದರೆ ಇದರಲ್ಲಿ ರಾಜಕೀಯ ಮಾಡಬಾರದು‌. ರಾಜ್ಯದಲ್ಲಿ ಆಡಳಿತ ಸರಿಯಾಗಿ ನಡೆಯುತ್ತಿಲ್ಲ. ಕಾನೂನು ಸುವ್ಯವಸ್ಥೆ ಕುಸಿದಿದ್ದು, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯಾವ ಇಲಾಖೆಯಲ್ಲೂ ಅನುದಾನ ಇಲ್ಲ. ದಿವಾಳಿಯಾಗಿರುವುದರಿಂದ ಯೋಜನೆಗೆ ಕೊಡಲು ಹಣ ಇಲ್ಲ. ಕೇಂದ್ರ ಸರ್ಕಾರವನ್ನು ತೆಗಳುವ ಭಾಷಣವನ್ನು ಓದಬಾರದು, ಈ ಕುರಿತು ಸರ್ಕಾರಕ್ಕೆ ಕಿವಿಮಾತು ಹೇಳಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ ಎಂದರು.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಭ್ರಷ್ಟಾಚಾರ ಮಾಡಿರುವುದು ಸಾಬೀತಾಗಿದೆ. ಆಡಿಯೋದಲ್ಲಿ ಎಲ್ಲವೂ ಗೊತ್ತಾಗಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಸಂಚು ಮಾಡಿದ್ದರೆ ಅದರ ಬಗ್ಗೆ ತಿಳಿಸಲಿ. ಈ ಹಿಂದೆ ಈಶ್ವರಪ್ಪ ಅವರ ರಾಜೀನಾಮೆಯನ್ನು ಸಿಎಂ ಸಿದ್ದರಾಮಯ್ಯ ಕೇಳಿದ್ದರು. ಆದರೆ ಈಗ ಧೃತರಾಷ್ಟ್ರನಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಈ ಅಕ್ರಮದಲ್ಲಿ ದೊಡ್ಡ ಪಾಲು ಮುಖ್ಯಮಂತ್ರಿಗೆ ತಲುಪುತ್ತಿದೆ. ಜೊತೆಗೆ ಅಸ್ಸಾಂ ಚುನಾವಣೆಗೂ ಹಣ ಬಳಕೆಯಾಗಲಿದೆ. ರಾಹುಲ್ ಗಾಂಧಿ ಮೊದಲು ಈ ಚೋರಿಯ ಬಗ್ಗೆ ಮಾತಾಡಬೇಕು. ಇದರ ವಿರುದ್ಧ ಹೋರಾಟ ಮಾಡುವ ಕುರಿತು ಚರ್ಚೆ ಮಾಡುತ್ತೇವೆ ಎಂದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೇ ಇವಿಎಂ ತರಲಾಗಿದೆ. ಅದನ್ನೇ ಈಗ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಎಲ್ಲ ಕಡೆ ಸೋಲಾಗುತ್ತಿರುವುದರಿಂದ ಅವರು ಇವಿಎಂ ಸರಿ ಇಲ್ಲ ಎನ್ನುತ್ತಿದ್ದಾರೆ. ಬೆಂಗಳೂರಿನಲ್ಲಿ ಸೋಲುತ್ತೇವೆಂದು ಗೊತ್ತಾಗಿರುವುದರಿಂದಲೇ ಮತಪತ್ರದ ಮೂಲಕ ಚುನಾವಣೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಕಾಂಗ್ರೆಸ್ ಪಕ್ಷದೊಳಗೆ ಭಿನ್ನಾಭಿಪ್ರಾಯವಿದೆ. ಸಿಎಂ ಹುದ್ದೆ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಬೇಕಿದೆ. ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಹೇಳಿಕೆ ಬಗ್ಗೆ ಅವರು ಗೊತ್ತಿಲ್ಲ ಎನ್ನುತ್ತಾರೆ ಎಂದರು.

ಬ್ಯಾಂಕ್ ಹಣ ದರೋಡೆ, ಮಹಿಳೆಯನ್ನು ಬೆತ್ತಲೆ ಮಾಡಿ ಥಳಿಸಿರುವುದು ಮೊದಲಾದ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಭಾಗಿಯಾಗಿದ್ದಾರೆ. ಈಗ ಹಿರಿಯ ಅಧಿಕಾರಿ ರಾಮಚಂದ್ರ ಅವರ ಪ್ರಕರಣ ಬೆಳಕಿಗೆ ಬಂದಿದೆ. ಇಂತಹ ಅಧಿಕಾರಿಗಳಿಗೆ ಸರ್ಕಾರ ಬೆಂಬಲ ನೀಡುತ್ತದೆ. ಪ್ರಾಮಾಣಿಕ ಅಧಿಕಾರಿಗಳ ಮನೋಸ್ಥೈರ್ಯ ಕುಸಿದಿದೆ. ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಮುಖಂಡ ಖದೀಮ ನಿಂದಿಸಿದ್ದರೂ ಸಚಿವ ಕೆ.ಎಚ್.ಮುನಿಯಪ್ಪ ಮುಖಂಡನನ್ನು ಬೆಂಬಲಿಸಿದ್ದಾರೆ ಎಂದರು.

Related Posts

Leave a Reply

Your email address will not be published. Required fields are marked *