ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳ್ಳುಗಾರ ಎಂದು ಲೋಸಕಭೆಯಲ್ಲಿ ಪ್ರಧಾನಿ ಮೋದಿಗೆ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೇಲೆ ಲೋಕಸಭೆಯಲ್ಲಿ ನಡೆಯುತ್ತಿರುವ ಚರ್ಚೆಯ ಮೇಲೆ ಮಾತನಾಡಿದ ಅವರು, ಪಾಕಿಸ್ತಾನದ ಮೇಲೆ ನಡೆದ ದಾಳಿಯನ್ನು ನಿಲ್ಲಿಸಿದ್ದು ನಾವೇ. ಕದನ ವಿರಾಮಕ್ಕೆ ನನ್ನ ಮಧ್ಯಸ್ಥಿಕೆ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 29 ಬಾರಿ ಹೇಳಿಕೆ ನೀಡಿದ್ದಾರೆ ಎಂದರು.
ಟ್ರಂಪ್ 29 ಬಾರಿ ಕದನ ವಿರಾಮಕ್ಕೆ ನಾವೇ ಕಾರಣ ಎಂದು ಪದೇಪದೆ ಹೇಳಿಕೆ ನೀಡುತ್ತಿದ್ದರೂ ಪ್ರಧಾನಿ ಮೋದಿ ಇದನ್ನು ನಿರಾಕರಿಸಿ ಇದುವರೆಗೂ ಒಂದೂ ಹೇಳಿಕೆ ಅಥವಾ ಟ್ವೀಟ್ ಮಾಡಿಲ್ಲ. ಒಂದು ವೇಳೆ ಡೊನಾಲ್ಡ್ ಟ್ರಂಪ್ ಹೇಳಿದ್ದು ಸುಳ್ಳು ಎಂದಾದರೆ ಇದೇ ವೇದಿಕೆಯಲ್ಲಿ ಟ್ರಂಪ್ ಸುಳ್ಳುಗಾರ ಎಂದು ಮೋದಿ ಹೇಳಿಕೆ ನೀಡಲಿ ಎಂದು ಸವಾಲು ಹಾಕಿದರು.
ಪ್ರಧಾನಿ ಮೋದಿ ರಾಜತಾಂತ್ರಿಕವಾಗಿ ವಿಫಲರಾಗಿದ್ದಾರೆ. ಆಪರೇಷನ್ ಸಿಂಧೂರ್ ವೇಳೆ ಎಲ್ಲಾ ಪಕ್ಷದವರು ಸರ್ಕಾರದ ಜೊತೆ ಬಂಡೆಯಂತೆ ನಿಂತು ಬೆಂಬಲ ನೀಡಿದರು. ಆದರೆ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಸರ್ಕಾರ ವಿಫಲವಾಯಿತು ಎಂದು ಆರೋಪಿಸಿದರು.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಸೇನೆಗೆ ಸ್ವಾತಂತ್ರ್ಯ ನೀಡಿರಲಿಲ್ಲ. 1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದ ವೇಳೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸಂಪೂರ್ಣ ಸ್ವಾತಂತ್ರ್ಯವನ್ನು ಸೇನೆಗೆ ನೀಡಿದ್ದರು ಎಂದು ಅವರು ಉಲ್ಲೇಖಿಸಿದರು.