Saturday, February 22, 2025
Menu

ವಿಶ್ವವಿದ್ಯಾಲಯ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಂಪುಟ ಉಪ ಸಮಿತಿ ತೀರ್ಮಾನ: ಡಿಕೆ ಶಿವಕುಮಾರ್

dk shivakumar

ಬೆಂಗಳೂರು: ರಾಜ್ಯದ ವಿಶ್ವವಿದ್ಯಾನಿಲಯಗಳ ಕಾರ್ಯವೈಖರಿ ಹಾಗೂ ಆರ್ಥಿಕ ಪರಿಸ್ಥಿತಿಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯು ರಾಜ್ಯ, ವಿಶ್ವವಿದ್ಯಾಲಯ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀರ್ಮಾನ ಮಾಡಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಸಚಿವ ಸಂಪುಟ ಉಪಸಮಿತಿ ಸಭೆಯ ತೀರ್ಮಾನಗಳ ಬಗ್ಗೆ ಕೇಳಿದಾಗ, “ಈ ಹಿಂದೆ ನೂತನ ವಿಶ್ವವಿದ್ಯಾಲಯದ ಬಗ್ಗೆ ಮಾಡಿದ್ದ ಕಾನೂನಿನಲ್ಲಿ ಪ್ರತಿ ವಿವಿಗೆ ಕೇವಲ 2 ಕೋಟಿ ಹಣ ಮೀಸಲಿಟ್ಟಿದ್ದರು. ಯಾವುದೇ ಜಮೀನು ನೀಡಿರಲಿಲ್ಲ ಎಂದರು.

ಮಂಡ್ಯ, ಚಾಮರಾಜನಗರ ಭಾಗದಲ್ಲಿ ಎಲ್ಲರೂ ಮೈಸೂರು ವಿವಿಗೆ ಮೊದಲ ಆದ್ಯತೆ ನೀಡಿದ ಪರಿಣಾಮ ಇತರೇ ವಿವಿಗಳಲ್ಲಿ ಪ್ರವೇಶಾತಿ ಕುಸಿತವಾಗಿತ್ತು. ಈ ಬಗ್ಗೆ ಆಂತರಿಕ ವರದಿ ತಯಾರಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿಗಳು ನನ್ನ ಅಧ್ಯಕ್ಷತೆಯಲ್ಲಿ ಸಂಪುಟ ಸಮಿತಿ ರಚಿಸಿದ್ದರು. ಈ ಬಗ್ಗೆ ನಾವು ಚರ್ಚೆ ಮಾಡಿ, ಬಂದಿರುವ ಸಲಹೆಗಳನ್ನು ಪರಾಮರ್ಶಿಸಿದ್ದೇವೆ. ಈ ಬಗ್ಗೆ ನಾವು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಲು ಆಗಿಲ್ಲ. ಮಾಹಿತಿ ನೀಡಿದ ನಂತರ ಸಚಿವ ಸಂಪುಟ ಸಭೆಯಲ್ಲಿ ಇಡುತ್ತೇವೆ. ನಂತರ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ವಿವರಿಸಿದರು.

ಅಗತ್ಯಬಿದ್ದರೆ ಈ ವಿವಿಗಳನ್ನು ಮುಚ್ಚಿಸುತ್ತೀರಾ ಎದು ಕೇಳಿದಾಗ, “ನಿಮ್ಮ ಮಾತಿಗೆ ನಾನು ಕುಣಿಯಲು ಆಗುವುದಿಲ್ಲ. ನಿಮ್ಮ ಪ್ರಯತ್ನದಿಂದ ನನ್ನ ಬಾಯಲ್ಲಿ ಕೆಲವು ವಿಚಾರ ಬರುವುದಿಲ್ಲ. ಬೇರೆಯವರನ್ನು ನಿಭಾಯಿಸುವಂತೆ ನನ್ನನ್ನು ನಿಭಾಯಿಸಲು ಪ್ರಯತ್ನಿಸಬೇಡಿ ಎಂದು ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯ, ವಿವಿಗಳು ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನಾವು ತೀರ್ಮಾನ ಮಾಡುತ್ತೇವೆ. ಈ ವಿಚಾರದಲ್ಲಿ ಯಾವುದೇ ವೈಯಕ್ತಿಕ ಉದ್ದೇಶವಿಲ್ಲ. ವಿದ್ಯಾರ್ಥಿಗಳ ಭವಿಷ್ಯವೇ ಮುಖ್ಯ. ಪ್ರಾದ್ಯಾಪಕರು ಮಂಡ್ಯ, ಚಾಮರಾಜನಗರಕ್ಕೆ ಹೋಗಲು ತಯಾರಿಲ್ಲ. ಅವರು ತಮ್ಮ ಹಿರಿತನ ಹಾಗೂ ಪಿಂಚಣಿ ವ್ಯವಸ್ಥೆ ಗಮನದಲ್ಲಿಟ್ಟಕೊಂಡು ಹಿಂಜರಿಯುತ್ತಿದ್ದಾರೆ. ಈ ವಿಚಾರವಾಗಿ ಬಂದಿರುವ ಸಲಹೆಗಳನ್ನು ಚರ್ಚೆ ಮಾಡುತ್ತೇವೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ನಿಮಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *