ಬೆಂಗಳೂರು:ಕ್ಯಾಬ್ ಚಾಲಕರೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಸಾತನೂರಿನ ಕಬ್ಬಾಳು ಸಮೀಪದ ಅರೆಕಟ್ಟೆದೊಡ್ಡಿ ಬಳಿ ಶನಿವಾರ ರಾತ್ರಿ ನಡೆದಿದೆ.
ಸೋಲದೇವನಹಳ್ಳಿಯ ಚಿಕ್ಕಬ್ಯಾಲಕೆರೆಯ ಚಂದ್ರಶೇಖರ (39) ಕೊಲೆಯಾದವರು, ನಗರದಲ್ಲಿ ಕ್ಯಾಬ್ ಚಾಲಕರಾಗಿದ್ದ ಚಂದ್ರಶೇಖರ ಅವರನ್ನು ರಾತ್ರಿ ದುಷ್ಕರ್ಮಿಗಳು ವಾಹನವೊಂದರಲ್ಲಿ ನಗರದಿಂದ ಅಪಹರಿಸಿಕೊಂಡು ಹೋಗಿ ಕಬ್ಬಾಳು ಸಮೀಪದ ಖಾಸಗಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಚಾಕುವಿನಿಂದ ಕತ್ತು ಕೊಯ್ದು ನಂತರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಭರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.
ರಸ್ತೆಯಲ್ಲಿ ಬಿದ್ದಿದ್ದ ಶವವನ್ನು ಗಮನಿಸಿದ ಸ್ಥಳೀಯರು ಸಾತನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಆದರೆ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಕೊಲೆಯಾದ ವ್ಯಕ್ತಿ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಚಿಕ್ಕಬ್ಯಾಲೆಕೆರೆ ನಿವಾಸಿ ಎಂದು ಗೊತ್ತಾಗಿದೆ. ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ವೈಯಕ್ತಿಕ ದ್ವೇಷಕ್ಕಾಗಿ ಕೊಲೆ ನಡೆಯಿತೋ ಅಥವಾ ಮಹಿಳೆಯ ವಿಚಾರದಲ್ಲಿ ಕೊಲೆ ನಡೆದಿದೆಯೋ ಎಂಬ ಬಗ್ಗೆ ಪೊಲೀಸರ ತನಿಖೆ ಕೈಗೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.