ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗೇಟ್ ಬಳಿ ಕಾರಿಗೆ ಖಾಸಗಿ ಬಸ್ವೊಂದು ಡಿಕ್ಕಿಯಾಗಿ ಕಾರು ಹೊತ್ತಿ ಉರಿದು ಇಬ್ಬರು ಸಜೀವ ದಹನವಾಗಿದ್ದಾರೆ.
ಕಾರು ಚಾಲಕ ಧನಂಜಯ್ (34) ಹಾಗೂ ತಾಯಿ ಕಲಾವತಿ (54) ಮೃತರು. ಕಾರಿನಲ್ಲಿ 5 ಮಂದಿ ಪ್ರಯಾಣ ಮಾಡುತ್ತಿದ್ದು ಮೂರು ವರ್ಷದ ಮಾನ್ವಿತ ಹಾಗೂ ಶೋಭಾ ಸೇರಿದಂತೆ ಉಮಾದೇವಿ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಏನೂ ತೊಂದರೆಯಾಗಿಲ್ಲ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತರು ಆಂಧ್ರ ಪ್ರದೇಶದ ಮದನಪಲ್ಲಿ ಮೂಲದವರು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಂಡಿದ್ದಾರೆ.