ದಾಂಡೇಲಿಯ ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ 500ರೂ. ಮುಖಬೆಲೆ ತೋರುವ ನೋಟುಗಳ ಕಂತೆ ಪತ್ತೆಯಾಗಿದೆ. 500 ಮುಖಬೆಲೆಯ 50 ನೋಟುಗಳ ಬಂಡಲ್‌ನಂತೆ ಅಂದಾಜು ₹14 ಕೋಟಿ ಮೌಲ್ಯವೆಂದು ಲೆಕ್ಕಕ್ಕೆ ತೆಗೆದುಕೊಳ್ಳಬಹುದಾದ ನಕಲಿ ನೋಟುಗಳು ಸಿಕ್ಕಿವೆ. ಖಚಿತ ಮಾಹಿತಿ ಹಿನ್ನೆಲೆ ಯಲ್ಲಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಈ ನೋಟುಗಳು ಹಾಗೂ ಹಣ ಎಣಿಸುವ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
ಗಾಂಧಿನಗರದಲ್ಲಿರುವ ನೂರ್‌ಜಾನ್ ಝುಂಜವಾಡಕರ ಎಂಬವರ ಮನೆಯನ್ನು ಗೋವಾ ಮೂಲದ ಅರ್ಷದ್ ಖಾನ್ ಎಂಬಾತ ಬಾಡಿಗೆಗೆ ಪಡೆದು ವಾಸವಿದ್ದ. ಕಳೆದ ಒಂದು ತಿಂಗಳಿನಿಂದ ಈತ ಮನೆಯಲ್ಲಿ ಇರಲಿಲ್ಲ, ಮನೆಯ ಹಿಂಬಾಗಿಲ ಚಿಲಕವನ್ನು ಸರಿಯಾಗಿ ಹಾಕಿರಲಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ಬಾಗಿಲು ತೆರೆದು ನೋಡಿದಾಗ ನಕಲಿ ನೋಟುಗಳು ಪತ್ತೆಯಾಗಿವೆ.
ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಗರ ಪೊಲೀಸರು ಪರಿಶೀಲಿಸಿದಾಗ 500 ಮುಖಬೆಲೆಯ ನೋಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲು ‘ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ’ಎಂಬ ಬರಹ ಇದೆ. ಗವರ್ನರ್ ಸಹಿ ಇಲ್ಲ. ನೋಟುಗಳಲ್ಲಿ ಸಂಖ್ಯೆ ಇರುವ ಜಾಗದಲ್ಲಿ ಸೊನ್ನೆಯನ್ನಷ್ಟೇ ನಮೂದಿಸಲಾಗಿದೆ. ‘ಮೂವೀ ಶೂಟಿಂಗ್ ಪರ್ಪೋಸ್ ಒನ್ಲಿ’ ಎಂದು ಬರೆದಿರುವ ಶೈನಿಂಗ್ ಪೇಪರ್‌ನಲ್ಲಿ ಈ ನೋಟುಗಳು ಮುದ್ರಿತಗೊಂಡಿವೆ.
ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ, ಅರ್ಷದ್ ಖಾನ್ ನನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.