ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಆರ್ಟಿಒ ಕಚೇರಿ ಬಳಿ ಮೆಡಿಕಲ್ ವಿದ್ಯಾರ್ಥಿಗಳು ಓಡಿಸುತ್ತಿದ್ದ ಬುಲೆಟ್ ಬೈಕ್ ಹಾಗೂ ಸ್ಕೂಟಿ ಡಿಕ್ಕಿಯಾಗಿ ೧೫ ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ತಾಯಿ ಗಾಯಗೊಂಡಿದ್ದಾರೆ.
ಯಲ್ಲಾಪುರ ತಾಲೂಕಿನ ಇಡಗುಂದಿ ನಿವಾಸಿ ಚಿರಂಜೀವಿ ಬ್ರಹ್ಮಾನಂದ ಕುಂಜಿ ಮೃತಪಟ್ಟ ಬಾಲಕ. ತಾಯಿ ಮತ್ತು ಮಗ ಮಾಜಾಳಿಯ ಮನೆಯೊಂದರಲ್ಲಿ ಬಾಡಿಗೆಗಿದ್ದರು. ಕಾರವಾರಕ್ಕೆ ಸ್ಕೂಟಿಯಲ್ಲಿ ಬರುತ್ತಿದ್ದಾಗ ಆರ್ಟಿಒ ಕಚೇರಿ ಬಳಿ ಹಿಂದಿನಿಂದ ಬಂದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಬುಲೆಟ್ ಬೈಕ್ ಡಿಕ್ಕಿ ಹೊಡೆದಿದೆ. ಚಿರಂಜೀವಿಯ ತಲೆ ರಸ್ತೆಗೆ ಬಡಿದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಪೊಲೀಸರು ಬಳಿಕ ಆಂಬುಲೆನ್ಸ್ ಮೂಲಕ ಚಿರಂಜೀವಿ ಮೃತದೇಹ ಕೊಂಡೊಯ್ದು ಗಾಯಗೊಂಡ ತಾಯಿ ಮತ್ತು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಗೋವಾದ ಖಾಸಗಿ ಆಸ್ಪತ್ರೆಗೆ ಕಳಿಸಿದ್ದಾರೆ. ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


