ಬೆಂಗಳೂರು: ರಾಮನವಮಿ ದಿನವಾದ ಭಾನುವಾರ ನಗರದಲ್ಲಿ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ರಾಜ್ಯ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿ ವೈಮನಸ್ಸು ಬದಿಗಿಟ್ಟು ಒಟ್ಟಾಗಿ ಹೋರಾಡುವಂತೆ ಪಕ್ಷದ ಮುಖಂಡರು,ಕಾರ್ಯಕರ್ತರಿಗೆ ಕರೆ ನೀಡಿದರು.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಅವರು ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ. ಕಾರ್ಯಕರ್ತರ ಮಾತು ಕೇಳಿ, ಅಹವಾಲು ಕೇಳಿ. ಯಾರ್ಯಾರೋ ಮಾತನಾಡುತ್ತಾರೆಂದು ಒತ್ತು ಕೊಡೋದು ಬೇಡ. ನಾವೇನು ಮಾಡುತ್ತೇನೆ ಎನ್ನುವುದಕ್ಕೆ ಗಮನ ಕೊಡಬೇಕು ಎಂದರು.
ನಾಲ್ಕು ಗೋಡೆ ಮಧ್ಯೆಯೇ ಪಕ್ಷದ ವಿಷಯ ಮಾತಾಡಬೇಕು. ಹೊರಗೆ ಮಾತಾಡಬಾರದು. ನಮ್ಮ ರಾಜ್ಯದಲ್ಲಿ ಪಕ್ಷಕ್ಕೆ ತುಂಬಾ ಸವಾಲುಗಳಿವೆ. ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳ ಸರಮಾಲೆಯೇ ಇದೆ ಭ್ರಷ್ಟ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯಲ್ಲಿನ ಎಲ್ಲ ಸಣ್ಣಪುಟ್ಟ ವಿಚಾರ ಬದಿಗಿಟ್ಟು, ರಣರಂಗಕ್ಕೆ ಇಳಿಬೇಕು, ಹೋರಾಟ ಮಾಡಬೇಕು. ನಮ್ಮ ನಮ್ಮ ನಡುವೆ ವ್ಯತ್ಯಾಸಗಳು ಇರಬಹುದು, ಅದನ್ನು ಎಲ್ಲಿಡಬೇಕೋ ಅಲ್ಲಿಡಬೇಕು. ನಮ್ಮಲ್ಲಿ ಶಿಸ್ತಿನ ಕೊರತೆ ಇದೆ. ಶಿಸ್ತು ರೂಢಿಸಿಕೊಳ್ಳಬೇಕು ಎಂದರು.
ಒಂದಾಗಿ ಮುಂದಕ್ಕೆ ಹೋಗೋಣ. ಸರ್ಕಾರದ ವಿರುದ್ಧ ಒಟ್ಟಾಗಿ ಹೋರಾಟ ನಡೆಯಬೇಕು. ಯಾರೋ ಮಾತನಾಡುತ್ತಾರೆಂದು ವಿಚಲಿತರಾಗುವುದು ಬೇಡ. ಭಾವನಾತ್ಮಕ ಮಾತುಗಳಿಗೂ ಮೇಲ್ನೋಟದ ಮಾತುಗಳಿಗೂ ವ್ಯತ್ಯಾಸ ಇದೆ. ಪ್ರಚಾರಪ್ರಿಯತೆಗೆ ಯಾರೂ ಮಾತಾಡೋದು ಬೇಡ ಎಂದು ಹೇಳಿದರು.
ಮಾಧ್ಯಮಗಳಲ್ಲಿ ಮಾತಾಡಿ ಯಾರೂ ದೊಡ್ಡವರು ಆಗಲ್ಲ. ಕೊಳಕುಬಾಯಿ ಮಾತಾಡಲಿದೆ ಎಂದು ತಲೆಕೆಡಿಸಿಕೊಳ್ಳುವುದು ಬೇಡ. ಕೆಳಗಿನ ಹಂತದವರೆಗೂ ಹೋರಾಟ ರೂಪಿಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಎಬಿಸಿಡಿ ಟೀಂ ಇಲ್ಲ:
ಬಿಜೆಪಿಯಲ್ಲಿ ಎಬಿಸಿಡಿ ಟೀಂ ಇಲ್ಲ, ಆಗಲೂಬಾರದು. ಯಾರದೋ ಮಾತಿಗೆ ಒತ್ತುಕೊಡಬಾರದು. ನಾವೆಲ್ಲ ಮನಸ್ಸಿನಿಂದ ಮಾತಾಡಬೇಕು. ಪ್ರಚಾರ ಮುಂದೆ ಅಪಪ್ರಚಾರ ಆಗಲಿದೆ. ಮಾದ್ಯಮದಲ್ಲಿ ಮಾತಾಡಿ, ಬ್ಯಾನರ್ನಲ್ಲಿ ಕಾಣಿಸಿಕೊಂಡು ರಾಜಕಾರಣಿ ಆಗಲು ಆಗಲ್ಲ. ಒಬ್ಬರೇ ಪಕ್ಷ ಕಟ್ಟಲು ಆಗಲ್ಲ, ಒಂದು ತಂಡವೇ ಬೇಕು. ಬಿಜೆಪಿ ಕರ್ನಾಟಕದಲ್ಲಿ ದಕ್ಷಿಣ ಭಾರತದ ಹೆಬ್ಬಾಗಿಲು ಆಗಿತ್ತು, ಮುಂದೆಯೂ ಆಗುತ್ತದೆ ಎಂದು ಡಿವಿಎಸ್ ಭವಿಷ್ಯ ನುಡಿದರು.
ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಪಕ್ಷ ಕಟ್ಟಿದ ಆರಂಭದ ದಿನಗಳನ್ನು ಸ್ಮರಿಸಿಕೊಳ್ಳುತ್ತಾ, ಆಗ ವೇದಿಕೆ ಕಟ್ಟಲು ಜನ ಸಿಗುತ್ತಿರಲಿಲ್ಲ. ಒಂದೂರಿನಿಂದ ಇನ್ನೊಂದೂರಿಗೆ ಹೋಗಲು ಸೌಕರ್ಯ ಇರಲಿಲ್ಲ. ಆರ್ಥಿಕ ಶಕ್ತಿ ಮೊದಲೇ ಇರಲಿಲ್ಲ ಎಂದು ಹೇಳಿದರು.
ಸ್ಪೂರ್ತಿ ತುಂಬಿದ್ದ ಅಟಲ್:
ದೇಶದ ಉದ್ದಗಲಕ್ಕೆ ಅಲ್ಲೊಬ್ಬ ಇಲ್ಲೊಬ್ಬ ಸಂಸದ ಇದ್ದರೂ ನಮ್ಮ ಕಾರ್ಯಕರ್ತರು ಧೃತಿಗೆಡಲಿಲ್ಲ. ಆಗ ಅಟಲ್‌ಜೀ ಅವರು ಅಂಧೇರಾ ಘಟೇಗಾ. ಸೂರಜ್ ನಿಕ್‌ಲೇಗಾ..ಕಮಲ್ ಖಿಲೇಗಾ ಅಂತ ಸ್ಪೂರ್ತಿ ತುಂಬಿದ್ದರು ನಾನು 1972ರಲ್ಲಿ ಶಿಕಾರಿಪುರ ಪಟ್ಟಣ ಪಂಚಾಯತ್ಗೆ ಸದಸ್ಯನಾದೆ, ನಂತರ ಅಧ್ಯಕ್ಷನಾದೆ. ಶಿಕಾರಿಪುರ ತಾಲೂಕು ಬಿಜೆಪಿ ಘಟಕ ಅಧ್ಯಕ್ಷ, ನಂತರ ಶಿವಮೊಗ್ಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷನಾದೆ. 1988ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಆದೆ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ಹಲವು ಏಳುಬೀಳು, ಸೋಲು ಗೆಲುವುಗಳನ್ನು ಕಂಡಿದ್ದೇನೆ. ಆದರೆ ಯಾವತ್ತೂ ನಾನು ನಂಬಿದ ಧ್ಯೇಯ ಸಿದ್ಧಾಂತ ಬಿಡಲಿಲ್ಲ ಎಂದರು.
ಅಪಮಾನ ಮಾಡಬೇಡಿ :
ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಮಾತನಾಡಿ, ನನ್ನನ್ನೂ ಸೇರಿ ಯಾರೂ ಪಕ್ಷದ ಕಾರ್ಯಕರ್ತರಿಗೆ ಅಪಮಾನ ಮಾಡಬಾರದು. ಡಿವಿಎಸ್ ಅವರು ನೇರವಾಗಿ ನಾವೆಲ್ಲ ನಾಯಕರು ಒಗ್ಗಟ್ಟಾಗಿ ಹೋಗಬೇಕು ಎಂದಿದ್ದಾರೆ. ಒಟ್ಟಾಗಿ ಹೋಗೋಣ, ಕಾರ್ಯಕರ್ತರ ಪರವಾಗಿ ನಿಲ್ಲೋಣ. ಈ ಸರ್ಕಾರ ಭ್ರಷ್ಟ ಸರ್ಕಾರ, ಅಹಿಂದ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಈಗ ಹಿಂದ ಕೈಬಿಟ್ಟಿದ್ದಾರೆ. ಅಧಿಕಾರ ಇದೆ ಎಂದು ಸಿದ್ದರಾಮಯ್ಯರ ನಡೆ ಆನೆ ನಡೆದಿದ್ದೇ ಹಾದಿ ಅನ್ನುವಂತಾಗಿದೆ. ಬಿಜೆಪಿ ಮುಸ್ಲಿಂರ ವಿರೋಧಿ ಅಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿಸುವ ಸಂಕಲ್ಪ ಮಾಡೋಣ. ನನಗೆ ಮಾಜಿ ಸಿಎಂ ಯಡಿಯೂರಪ್ಪ ಮಗ ಅನಿಸಿಕೊಳ್ಳೋಕೆ, ಬಿಜೆಪಿ ಅಧ್ಯಕ್ಷ ಆಗಿರೋದಕ್ಕೆ ಹೆಮ್ಮೆ ಇದೆ. ಅದಕ್ಕಿಂತ ಹೆಚ್ಚಿನ ಹೆಮ್ಮೆ ನಾನೊಬ್ಬ ಬಿಜೆಪಿ ಕಾರ್ಯಕರ್ತ ಆಗಿರೋದಕ್ಕೆ ಇದೆ ಎಂದು ತಿಳಿಸಿದರು.
ಹಿಂದೂಗಳೇ ಬಿಜೆಪಿ ಟೀಕೆ:
ಈ ವೇಳೆ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿಗೆ ಬೈಯುವವರು ಬೇರಾರು ಅಲ್ಲ. ನಮ್ಮವರೇ ನಮಗೆ ಬಯ್ಯೋದು, ಟೀಕಿಸೋದು. ನಮ್ಮ ನಾಯಕರೆಲ್ಲ ರಾತ್ರಿ ಹಗಲು ಕೆಲಸ ಮಾಡ್ತಿದ್ದಾರೆ. ಆದರೂ ಹೊಂದಾಣಿಕೆ ರಾಜಕಾರಣ ಎಂದು ಆರೋಪ ಮಾಡ್ತಾರೆ. ಎಲ್ಲಿ ಅಡ್ಜೆಸ್ಟ್ಮೆಂಟ್ ಮಾಡ್ತಿದ್ದಾರೆ?. ನಿಮಗೆ ಧೈರ್ಯ ಇದ್ದರೆ ಮುಂದೆ ಬಂದು ಹೇಳಿ. ನಾವು ತಪ್ಪಿದ್ದರೆ ತಿದ್ದಿಕೊಳ್ತೇವೆ. ಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಬೇಡಿ ಎಂದು ಮನವಿ ಮಾಡಿದರು.
ನನ್ನಂಥ ತುಂಬಾ ಜನ ಬಿಜೆಪಿಗೆ ಬಂದಿರಬಹುದು. ನನ್ನನ್ನು ಚೆನ್ನಾಗಿ ನೋಡಿಕೊಂಡು ಸ್ಥಾನಮಾನ ಕೊಟ್ಟಿದ್ದಾರೆ ಕೆಲವರು ಇದರ ಬಗ್ಗೆಯೂ ಮಾತಾಡ್ತಾರೆ. ಬಿಜೆಪಿಯನ್ನು ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ಧರು ಟೀಕಿಸಲ್ಲ.
ಆದರೆ ಬಿಜೆಪಿಯನ್ನು ಹಿಂದೂಗಳೇ ಟೀಕಿಸ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಹಾಕೋರೂ ನಮ್ಮವರೇ. ವಿಜಯೇಂದ್ರ ಯಾವಾಗ ನಿದ್ದೆ ಮಾಡ್ತಾರೋ ಗೊತ್ತಿಲ್ಲ, ಯಾವಾಗಲೂ ಪಕ್ಷದ ಕೆಲಸ, ಪ್ರವಾಸ ಎಂದು ಓಡಾಡುತ್ತಾರೆ. ಇಷ್ಟಿದ್ದೂ ಅಡ್ಜಸ್ಟ್‌ಮೆಂಟ್ ಎಂದು ಆರೋಪ ಮಾಡೋರು ಯಾರು?. ನಮ್ಮವರೇ ಆ ಆರೋಪ ಮಾಡಲಿದ್ದಾರೆ ಎಂದು ಪರೋಕ್ಷವಾಗಿ ಟೀಕಾಕಾರರಿಗೆ ಟಾಂಗ್ ನೀಡಿದರು.