ನವದೆಹಲಿ: ಆಕಸ್ಮಿಕವಾಗಿ ಗಡಿ ದಾಟಿದ್ದ ಭಾರತದ ಬಿಎಸ್ ಎಫ್ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿದೆ.
ಆರ್ಟರಿ ಗಡಿಯಲ್ಲಿ ಬುಧವಾರ ಬೆಳಿಗ್ಗೆ 10.30ರ ಸುಮಾರಿಗೆ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಹಸ್ತಾಂತರಿಸಿದೆ.
ಏಪ್ರಿಲ್ 23ರಂದು ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಯೊಳಗೆ ಪ್ರವೇಶಿಸಿದ್ದ ಪೂರ್ಣಮ್ ಕುಮಾರ್ ಅವರನ್ನು ಪಾಕಿಸ್ತಾನದ ರೇಂಜರ್ಸ್ ವಶಕ್ಕೆ ಪಡೆದಿದ್ದರು.
40 ವರ್ಷದ ಪೂರ್ಣಮ್ ಕುಮಾರ್ ಪಂಜಾಬ್ ನ ಫಿರೋಜಾಬಾದ್ ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ನಂತರ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಈ ವೇಳೆ ಗಸ್ತಿನಲ್ಲಿದ್ದ ಪೂರ್ಣಮ್ ಕುಮಾರ್ ಆಕಸ್ಮಿಕವಾಗಿ ಗಡಿ ದಾಳಿ ಪಾಕಿಸ್ತಾನ ಪ್ರವೇಶಿಸಿದ್ದರು.
ಜಮ್ಮು ಕಾಶ್ಮೀರದಿಂದ ಗುಜರಾತ್ ನ ಕಚ್ ವರೆಗೆ 3,323 ಕಿ.ಮೀ. ಉದ್ದದ ಭಾರತ ಮತ್ತು ಪಾಕಿಸ್ತಾನ ಗಡಿಯನ್ನು ಬಿಎಸ್ ಎಫ್ ಯೋಧರು ಕಾಯುತ್ತಿದ್ದಾರೆ. ಉಭಯ ದೇಶಗಳ ಯೋಧರು ಆಕಸ್ಮಿಕವಾಗಿ ಗಡಿ ದಾಟುವುದು ಸಾಮಾನ್ಯ ವಿಷಯವಾಗಿದೆ. ಫ್ಲ್ಯಾಗ್ ಮೀಟಿಂಗ್ ವೇಳೆ ಈ ಸಮಸ್ಯೆ ಆಗಿಂದಾಗಲೆ ಬಗೆಹರಿಸಿಕೊಳ್ಳಲಾಗುತ್ತದೆ.
ಆದರೆ ಈ ಬಾರಿ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಭಾರತೀಯ ಯೋಧನನ್ನು ಬಿಡುಗಡೆ ಮಾಡದೇ ವಶದಲ್ಲಿ ಇರಿಸಿಕೊಂಡಿತ್ತು. ಇದೀಗ ಕದನ ವಿರಾಮ ಘೋಷಣೆ ಆದ ಹಿನ್ನೆಲೆಯಲ್ಲಿ ಯಾವುದೇ ತಕರಾರು ಇಲ್ಲದೇ ಯೋಧನನ್ನು ಭಾರತಕ್ಕೆ ಹಸ್ತಾಂತರಿಸಿದೆ.