ನಮಗೆ ನಾಳೆಯಿಂದ ಒಳ್ಳೆಯ ದಿನಗಳು ಆರಂಭವಾಗಲಿವೆ. ಬಿಎಸ್ ಯಡಿಯೂರಪ್ಪ ಅವರ ಕುಟುಂಬದ ಅಂತ್ಯ ನಾಳೆಯಿಂದ ಆರಂಭವಾಗಲಿದೆ ಎಂದು ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ದರಿಂದ ನಮಗೆ ಪೂರ್ಣ ಪ್ರಮಾಣದಲ್ಲಿ ಹೋರಾಟ ಮಾಡಲು ಅನುಕೂಲ ಮಾಡಿಕೊಟ್ಟಂತೆ ಆಗಿದೆ. ಬಿಎಸ್ ವೈ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಆರಂಭಿಸುವುದಾಗಿ ಹೇಳಿದರು.
ಬಿಜೆಪಿಯಿಂದ ಉಚ್ಛಾಟನೆ ಆದೇಶ ವಾಪಸ್ ಪಡೆಯುವಂತೆ ನನು ಮೇಲ್ಮೇನವಿ ಸಲ್ಲಿಸಲ್ಲ. ಹೈಕಮಾಂಡ್ ಮುಂದೆ ನಾನು ಕೈ ಕಟ್ಟಿ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸನಾತನ ಧರ್ಮ, ಹಿಂದೂ ಧರ್ಮದ ಬಿಜೆಪಿ ಕಟ್ಟುವುದೇ ನಮ್ಮ ಗುರಿಯಾಗಿದೆ. ಬಿಜೆಪಿಗೆ ನಾನು ವಾಪಸ್ ಬಂದೇ ಬರುತ್ತೇನೆ. ಆ ಕಾಲವೂ ಬರುತ್ತದೆ. ಕಾದು ನೋಡಿ ಎಂದು ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.