ಶಿವಮೊಗ್ಗ: ವೃದ್ಧ ದಂಪತಿಯ ಅನುಮಾನಸ್ಪದ ಸಾವು ಪ್ರಕರಣವನ್ನು 24 ಗಂಟೆಯಲ್ಲೇ ಭೇದಿಸಿದ ಭದ್ರಾವತಿ ಓಲ್ಡ್ ಟೌನ್ ಪೊಲೀಸರು, ಇಂಜೆಕ್ಷನ್ ನೀಡಿ ಕೊಂದ ವೈದ್ಯನಾಗಿರುವ ತಮ್ಮನ ಮಗನನ್ನು ಬಂಧಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ಮಾತನಾಡಿ, ಆರೋಪಿ ಬಿಎಎಂಎಸ್ ವೈದ್ಯ ಡಾ. ಮಲ್ಲೇಶ್ ಎಂಬಾತನನ್ನು ಬಂಧಿಸಲಾಗಿದೆ. ಈತ ಮೃತ ಚಂದ್ರಪ್ಪ ಅವರ ತಮ್ಮ ಪಾಲಾಕ್ಷಪ್ಪನ ಮಗನಾಗಿದ್ದು, ವೃತ್ತಿಯಲ್ಲಿ ಬಿಎಎಂಎಸ್ ವೈದ್ಯನಾಗಿದ್ದಾರೆ ಎಂದರು.
ಭೂತನಗೂಡಿಯಲ್ಲಿಮಂಗಳವಾರ ಸಂಜೆ ಎರಡು ಶವಗಳು ಪತ್ತೆಯಾಗಿತ್ತು. ಪರಿಶೀಲನೆ ನಡೆಸಿದಾಗ ಚಂದ್ರಪ್ಪ (82) ಮತ್ತು ಜಯಮ್ಮ(72) ಅವರ ಶವ ಪ್ರತ್ಯೇಕ ಕೊಠಡಿಯಲ್ಲಿ ಪತ್ತೆಯಾಗಿದ್ದವು.
ಡಾ. ಮಲ್ಲೇಶ್ ವಿಪರೀತ ಸಾಲದ ಸುಳಿಯಲ್ಲಿ ಸಿಲುಕಿದ್ದ. ಅದನ್ನು ತೀರಿಸಲು ಚಂದ್ರಪ್ಪ ಅವರ ಬಳಿ 15 ಲಕ್ಷ ರೂಪಾಯಿ ಸಾಲ ಕೇಳಿದ್ದ. ಆದರೆ ಅವರು ಹಣ ನೀಡಲು ನಿರಾಕರಿಸಿದ್ದರು. ಇದೇ ದ್ವೇಷ ಹಾಗೂ ಹಣದ ಹಪಾಹಪಿಯಿಂದ ದಂಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದು ಅವರು ತಿಳಿಸಿದರು.
ಇಂಜೆಕ್ಷನ್ ನೀಡಿ ಬಚಾವ್ ಆಗಲು ಮುಂದಾಗಿದ್ದ ವೈದ್ಯ:
ಶಿವಮೊಗ್ಗದಲ್ಲಿ ಬಿಎಎಂಎಸ್ ವೈದ್ಯನಾಗಿ ಎರಡು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದ ಮಲ್ಲೇಶ್ ಬಹಳ ಸಾಲ ಮಾಡಿಕೊಂಡಿದ್ದ. ಮೃತ ಚಂದ್ರಪ್ಪನವರಿಗೆ ಆರೋಗ್ಯ ಸಮಸ್ಯೆ ಇತ್ತು ಎಂಬುದು ಮಲ್ಲೇಶ್ ನಿಗೆ ಗೊತ್ತಿತ್ತು.
ಮನೆಗೆ ಬಂದವನು ಇಬ್ಬರ ಆರೋಗ್ಯ ವಿಚಾರಿಸಿದ್ದಾನೆ. ಹಳೇಯ ಮೆಡಿಕಲ್ ರಿಪೋರ್ಟ್ ಕೇಳಿ ಪಡೆದಿದ್ದಾನೆ. ಅವರಿಗೆ ಕೈ-ಕಾಲು ಗಂಟಿನ ನೋವು ಕಡಿಮೆಯಾಗಲು ಇಂಜೆಕ್ಷನ್ ನೀಡುವುದಾಗಿ ತಿಳಿಸಿ ಚಿಕಿತ್ಸೆ ನೀಡುವ ನೆಪದಲ್ಲಿ ಚಂದ್ರಪ್ಪ ಮತ್ತು ಅವರ ಪತ್ನಿಗೆ ತಲಾ 50 ಎಂ.ಜಿ ಪ್ರೊಫೋಫೋಲ್ ಎಂಬ ಅರಿವಳಿಕೆ ಇಂಜೆಕ್ಷನ್ ನೀಡಿದ್ದಾನೆ.
ಅತಿಯಾದ ಡೋಸ್ನಿಂದ ದಂಪತಿ ಸಾವನ್ನಪ್ಪುತ್ತಿದ್ದಂತೆಯೇ, ಅವರ ಮೈಮೇಲಿದ್ದ ಸುಮಾರು 80 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾನೆ. ಒಂದೇ ದಿನದಲ್ಲಿ ಕೊಲೆ ಮಾಡಿ, ಚಿನ್ನವನ್ನು ಅಡವಿಟ್ಟು ಸಾಲ ತೀರಿಸಲು ಮುಂದಾಗಿದ್ದು, ಬ್ಯಾಂಕ್ ಖಾತೆಯಲ್ಲಿ 50 ಸಾವಿರ ರೂ. ಹಣ ಇಟ್ಟುಕೊಂಡಿದ್ದಾನೆ.
ಈ ಸಂಬಂಧ ತನಿಖೆಯಲ್ಲಿ ಪಾಲ್ಗೊಂಡ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ತಂಡದಲ್ಲಿದ್ದ ಎಡಿಎಸ್ಪಿ ಕಾರ್ಯಪ್ಪ, ಮತ್ತು ರಮೇಶ್ ಬಿ., ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್, ಸಿಪಿಐ ನಾಗಮ್ಮ, ಪಿಎಸ್ಐ ಸುನೀಲ್ ಬಿ. ತೇಲಿ, ಹಳೇನಗರ ಪೊಲೀಸ್ ಠಾಣೆಯ ಎಎಸ್ಐ ವೆಂಕಟೇಶ್, ಹೆಚ್ಸಿ ಚಿನ್ನಾನಾಯ್ಕ, ಹೆಚ್ಸಿ ಹಾಲಪ್ಪ, ಪಿಸಿಗಳಾದ ಸುನೀಲ್ಕುಮಾರ್, ಕಾಂತ್ರಾಜ್, ಮಂಜುನಾಥ್, ಬಸವರಾಜ್ ಇವರಿಗೆ ನಗದು ಬಹುಮಾನ ಘೋಷಿಸಿ ಅಭಿನಂದನೆ ಸಲ್ಲಿಸಿದರು.
ಸುದ್ದಿಗೋಷ್ಟಿಯಲ್ಲಿ ಅಡಿಷನ್ ಎಸ್ಪಿ ಕಾರಿಯಪ್ಪ,ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್,ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆ ವೃತ್ತ ನಿರೀಕ್ಷಕಿ ನಾಗಮ್ಮ,ಉಪನಿರೀಕ್ಷಕ ಸುನೀಲ್ ಇದ್ದರು.


