ಸೊರಬ ತಾಲೂಕಿನ ಜೇಡಿಗೆರೆ ಗ್ರಾಮದಲ್ಲಿ ಅತ್ತಿಗೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನು ಅಣ್ಣನೇ ಕೊಲೆ ಮಾಡಿದ್ದಾನೆ. ರಾಮಚಂದ್ರ (28) ಕೊಲೆಯಾದ ವ್ಯಕ್ತಿಯಾಗಿದ್ದು, ಅಣ್ಣ ಮಾಲತೇಶ ಕೊಲೆ ಆರೋಪಿ.
ಒಂದೂವರೆ ತಿಂಗಳ ಹಿಂದೆ ರಾಮಚಂದ್ರ ನಾಪತ್ತೆಯಾಗಿದ್ದ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಪ್ರಕಣದ ತನಿಖೆ ತೀವ್ರಗೊಳಿಸಿದಾಗ ಅಣ್ಣನೇ ಕೊಲೆ ಮಾಡಿರುವುದು ಬಯಲಾಗಿದೆ.
ತನ್ನ ಪತ್ನಿ ಜೊತೆಗಿನ ಅನೈತಿಕ ಸಂಬಂಧದ ಕಾರಣ ತಮ್ಮ ರಾಮಚಂದ್ರನನ್ನು ಮಾಲತೇಶ್ ಕೊಂದು ತೋಟದಲ್ಲಿ ಹೂತು ಹಾಕಿದ್ದ. ಪೊಲೀಸರು ತೋಟದಲ್ಲಿ ಗುಂಡಿ ತೆಗೆದು ಪರಿಶೀಲನೆ ನಡೆಸಿದಾಗ ರಾಮಚಂದ್ರನ ಶವ ಸಿಕ್ಕಿದೆ. ತನ್ನ ಹೆಂಡತಿ ಜೊತೆಗೆ ರಾಮಚಂದ್ರನ ಅಕ್ರಮ ಸಂಬಂಧ ವಿಷಯಕ್ಕೆ ಅಣ್ಣ ಮಾಲತೇಶ್ ಸಿಟ್ಟಾಗಿದ್ದ. ಹೀಗಾಗಿ ಕೊಲೆಗೆ ಸಂಚು ರೂಪಿಸಿದ್ದ.
ಬೇಗ ಮದುವೆಯಾಗಲೆಂದು ಪೂಜೆ ನೆಪದಲ್ಲಿ ಜೇಡಿಗೆರೆ ಬಳಿ ತಾನು ಕೆಲಸ ಮಾಡುತ್ತಿದ್ದ ತೋಟಕ್ಕೆ ರಾಮಚಂದ್ರನನ್ನು ಕೆರೆದುಕೊಂಡು ಹೋಗಿದ್ದ. ಪೂಜೆ ನೆಪದಲ್ಲಿ ಆತನಿಗೆ ಸರಿಯಾಗಿ ಮದ್ಯ ಕುಡಿಸಿ ಕಂಬಕ್ಕೆ ಕಟ್ಟಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಕೊಲೆ ಮಾಡುವ ಮೊದಲೇ ಗುಂಡಿ ತೋಡಿ ಇಟ್ಟಿದ್ದ. ಕೊಲೆಗೈದ ನಂತರ ಶವವನ್ನು ಗುಂಡಿಯಲ್ಲಿ ಹೂತು ಹಾಕಿದ್ದ.
ರಾಮಚಂದ್ರ ನಾಪತ್ತೆ ಬಗ್ಗೆ ಕುಟುಂಬ ಆತಂಕದಲ್ಲಿದ್ದರೂ ತಾನು ಅಮಾಯಕ ಎಂಬ ರೀತಿ ಆರಾಮವಾಗಿಯೇ ಓಡಾಡಿಕೊಂಡಿದ್ದ. ಮೊಬೈಲ್ ಟವರ್ ಲೊಕೇಶನ್ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಕೊಲೆ ವಿಚಾರ ಹೊರ ಬಂದಿದೆ.


