ಆರ್ಥಿಕವಾಗಿ ದುರ್ಬಲರ ಪಾಲಿಗೆ ಧೈರ್ಯ ತುಂಬಬೇಕಾದ ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮೆಡಿಸಿನ್ ಮಾಫಿಯಾ ನಡೆಯುತ್ತಿರುವುದನ್ನು ಜಿಲ್ಲಾಧಿಕಾರಿ ಪತ್ತೆ ಹಚ್ಚಿ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ರಿಮ್ಸ್ ಗೆ ಏಕಾಏಕಿ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ, ರೇಬಿಸ್ ಇಮ್ಯುನೋಗ್ಲೋಬಿನ್ ಇಂಜೆಕ್ಷನ್ ಕೊಡುವಲ್ಲಿ ಬ್ರಿಮ್ಸ್ ವೈದ್ಯರ ಕಳ್ಳಾಟವನ್ನು ಬಯಲಿಗೆಲೆದಿದ್ದಾರೆ. ಹುಚ್ಚುನಾಯಿ ಕಡಿತಕ್ಕೆ ನೀಡುವ ಇಂಜಕ್ಷನ್ ಇಲ್ಲ ಎಂದು ಬ್ರಿಮ್ಸ್ ಸಿಬ್ಬಂದಿ ಖಾಸಗಿ ಮೆಡಿಕಲ್‌ಗೆ ರೆಫರ್ ಮಾಡುತ್ತಿದ್ದಾರೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ರೇಬಿಸ್ ಇಮ್ಯುನೋಗ್ಲೋಬಿನ್ ಇಂಜೆಕ್ಷನ್ ಸಿಗದೆ ಗಾಯಾಳುಗಳು 2,150 ರೂ. ಕೊಟ್ಟು ಆಸ್ಪತ್ರೆಯ ಹೊರಗಡೆ ಇಂಜೆಕ್ಷನ್ ಖರೀದಿಸುತ್ತಿದ್ದಾರೆ.
ಮನ್ನಾಏಖೇಳ್ಳಿ ಮೂಲದ ಶಮೀತಾ, ಚರಣ್‌ರೆಡ್ಡಿ, ಈಶ್ವರಿ ಸೇರಿ ಹಲವರಿಗೆ ಹುಚ್ಚುನಾಯಿ ಕಡಿದಿದ್ದು, ಚಿಕಿತ್ಸೆಗೆಂದು ಬ್ರಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಅವರಿಗೆ ರೇಬಿಸ್ ನಿರ್ಮೂಲನೆಗೆ ಅಗತ್ಯ ಇಂಜೆಕ್ಷನ್ ನೀಡದ ಆಸ್ಪತ್ರೆ ಸಿಬ್ಬಂದಿ ಹೊರಗಿನಿಂದ ತರಲು ಚೀಟಿ ನೀಡಿದ್ದಾರೆ.
ಆಸ್ಪತ್ರೆಗೆ ದೌಡಾಯಿಸಿ ಪರಿಶೀಲಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಬ್ರಿಮ್ಸ್ ಆಸ್ಪತ್ರೆಯ ನಿರ್ದೇಶಕರು, ವೈದ್ಯರು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಕೊರತೆ ಇಲ್ಲ, ಸಮನ್ವಯತೆಯ ಕೊರತೆ ಕಾರಣ ಸಮಸ್ಯೆ ಆಗಿದೆ. ತಪ್ಪಿತಸ್ಥರ ವಿರುದ್ಧ 48 ಗಂಟೆಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಸಿ ಶಿಲ್ಪಾ ಶರ್ಮಾ ಹೇಳಿದ್ದಾರೆ.