ಜಗತ್ತು ಬಲಿಷ್ಠರನ್ನು ಗೌರವಿಸುತ್ತದೆಯೇ ಹೊರತು ದುರ್ಬಲರನ್ನಲ್ಲ, ಜಗತ್ತಿನಲ್ಲಿ ಭಯಕ್ಕೆ ಸ್ಥಾನವಿಲ್ಲ, ಜಗತ್ತು ಶಕ್ತಿಯನ್ನು ಗೌರವಿಸುತ್ತದೆ ಎಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದ್ದರು ಎಂಬುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಸ್ತಾಪಿಸಿದ್ದಾರೆ, ಲಕ್ನೋದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಷನ್ ಮತ್ತು ಪರೀಕ್ಷಾ ಸೌಲಭ್ಯವನ್ನು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇದು ಒಂದು ಕಾರ್ಖಾನೆಯ ಉದ್ಘಾಟನೆ ಮಾತ್ರವಲ್ಲ, ಸ್ವಾವಲಂಬನೆಯ ಉತ್ತಮ ಉದಾಹರಣೆ. ಇದಕ್ಕೆ 4 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಪ್ರತಿದಿನ ಬರುವ ಹೊಸ ತಂತ್ರಜ್ಞಾನಗಳು ಜಗತ್ತಿನಲ್ಲಿ ಕ್ರಾಂತಿಯನ್ನು ತರುತ್ತಿವೆ. ಮುಂಬರುವ ದಿನಗಳಲ್ಲಿ ಲಕ್ನೋ ತಂತ್ರಜ್ಞಾನದ ಸಂಗಮವಾಗಲಿದ್ದು, ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂದರು.
ದೇಶದ ಅಭಿವೃದ್ಧಿ ಕೆಲಸಗಳು ಎಂದಿಗೂ ನಿಲ್ಲುವುದಿಲ್ಲ, ಗುರಿಯನ್ನು ಸಾಧಿಸುತ್ತೇವೆ. ಬ್ರಹ್ಮೋಸ್ ವಿಶ್ವದ ಅತ್ಯಂತ ವೇಗದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳಲ್ಲಿ ಒಂದಾಗಿದೆ. ವಿಶ್ವದ ಅತ್ಯಂತ ವಿನಾಶಕಾರಿ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್‌ನ ಉತ್ಪಾದನಾ ಘಟಕವನ್ನು ಉದ್ಘಾಟಿಸಲಾಯಿತು. ರಕ್ಷಣಾ ಕ್ಷೇತ್ರದಲ್ಲಿ ದೇಶದ ಸ್ವಾವಲಂಬನೆ ಯನ್ನು ಬಲಪಡಿಸುವ ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯಲ್ಲಿ ಕಾರ್ಯತಂತ್ರದ ಶಕ್ತಿಗೆ ಹೊಸ ಬಲವನ್ನು ನೀಡುವ ನಿಟ್ಟಿನಲ್ಲಿ ಇದು ಮೈಲಿಗಲ್ಲು ಎಂದು ಸಚಿವರು ಹೇಳಿದರು.
ಲಕ್ನೋ ನೋಡ್‌ನಲ್ಲಿ ಸ್ಥಾಪಿಸಲಾದ ಬ್ರಹ್ಮೋಸ್ ಉತ್ಪಾದನಾ ಘಟಕವನ್ನು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾ ಗಿದೆ. ರಾಜ್ಯ ಸರ್ಕಾರ 80 ಹೆಕ್ಟೇರ್ ಭೂಮಿಯನ್ನು ಉಚಿತವಾಗಿ ನೀಡಿತ್ತು. ಬ್ರಹ್ಮೋಸ್ ಕ್ಷಿಪಣಿ ಭಾರತ ಮತ್ತು ರಷ್ಯಾ ನಡುವಿನ ಜಂಟಿ ಉದ್ಯಮದ ಪರಿಣಾಮವಾಗಿದೆ. ಇದು 290-400 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ ಮತ್ತು ಮ್ಯಾಕ್ 2.8 ವೇಗವನ್ನು ಹೊಂದಿದೆ (ಶಬ್ದದ ವೇಗಕ್ಕಿಂತ ಸುಮಾರು ಮೂರು ಪಟ್ಟು). ಈ ಕ್ಷಿಪಣಿಯನ್ನು ಭೂಮಿ, ಆಕಾಶ ಮತ್ತು ಸಮುದ್ರದಿಂದ ಉಡಾಯಿಸಬಹುದು ಎಂದು ಮಾಹಿತಿ ನೀಡಿದರು.