ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದ ಅಳಂದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಗೆ ಹೊಸ ಹುದ್ದೆ ನೀಡಲಾಗಿದೆ.
ಕಲಬುರಗಿ ಜಿಲ್ಲೆ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬಿ.ಆರ್.ಪಾಟೀಲ್ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಮತ್ತು ಎಲ್ಲಾ ಸೌಲಭ್ಯ ನೀಡವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಿಎಂ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದ ಬಿ.ಆರ್.ಪಾಟೀಲ್‌ಗೆ ಹೊಸ ಹುದ್ದೆ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದ್ದು, ಅವರು ಸ್ವೀಕಾರ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಚಿವ ಸ್ಥಾನ ಸಿಗದಿದ್ದರಿಂದ ಕೆಲ ಹಿರಿಯ ಶಾಸಕರು ಅಸಮಾಧಾನಗೊಂಡಿದ್ದರು. ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ಸಿಕ್ಕಿಲ್ಲ ಎಂದು ಬಸವರಾಜ ರಾಯರೆಡ್ಡಿ, ಆರ್ ವಿ ದೇಶಪಾಂಡೆ ಹಾಗೂ ಬಿಆರ್ ಪಾಟೀಲ್ ಅಸಮಾಧಾನ ಹೊರಹಾಕಿದ್ದರು.ಸಿಎಂ ಸಿದ್ದರಾಮಯ್ಯ ಈ ಮೂವರು ಹಿರಿಯ ಶಾಸಕರಿಗೆ ಸಚಿವ ಸಂಪುಟ ಸ್ಥಾನಮಾನದ ಹುದ್ದೆ ನೀಡಿದ್ದರು.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಬಸವರಾಜ ರಾಯರಡ್ಡಿ ಅವರನ್ನು ನೇಮಕ ಮಾಡಿದ್ದರೆ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಆರ್.ವಿ.ದೇಶಪಾಂಡೆ ಅವರನ್ನು ನೇಮಕ ಮಾಡಲಾಗಿತ್ತು. ಬಿಆರ್ ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಆದರೆ ನೇಮಕಗೊಂಡ ಕೆಲವು ತಿಂಗಳ ಬಳಿಕ ಬಿಆರ್ ಪಾಟೀಲ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈಗ ಅವರನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಬಿಆರ್ ಪಾಟೀಲ್ ಆಳಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಯಸಿದ್ದರು. ಸಚಿವ ಸ್ಥಾನ ಸಿಗದೆ ಇರುವ ಕಾರಣ ಹೆಚ್ಚಿನ ಅನುದಾನ ಸಿಗಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ ಕಳೆದ ಬಜೆಟ್‌ನಲ್ಲಿ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ನೀಡದೆ ಇರೋದಕ್ಕೆ ಬೇಸರಗೊಂಡು ರಾಜೀನಾಮೆ ನೀಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿತ್ತು.
ರಾಜೀನಾಮೆ ಮೂಲಕ ಒತ್ತಡ ಹಾಕಿ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿರೀಕ್ಷಿಸುತ್ತಿರುವ ಸಾಧ್ಯತೆ ಇದೆ ಎನ್ನುವ ಚರ್ಚೆಗಳು ನಡೆದಿದ್ದವು.