ದಾವಣಗೆರೆ: ಕೇಂದ್ರ ಸರ್ಕಾರದ ತೀರ್ಮಾನದಂತೆ ವಾರ್ಷಿಕ ಆದಾಯ 1 ಲಕ್ಷದ 20 ಸಾವಿರ ರೂಪಾಯಿಗಿಂತ ಅಧಿಕ ಆದಾಯ ಹೊಂದಿದವರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸರ್ವೆ ಪ್ರಕಾರ 1 ಲಕ್ಷದ 20 ಸಾವಿರಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಮಾಡಬೇಕು ಎಂದು ಇದೆ. ಈ ಬಗ್ಗೆ ಸರ್ಕಾರ ಯೋಚನೆ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆದರೆ, ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅರ್ಹರು ಯಾರಾದರೂ ಬಿಟ್ಟು ಹೋಗಿದ್ದರೆ ಅವರಿಗೆ ಬಿಪಿಎಲ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಲಾಗಿತ್ತು. ಈ ವೇಳೆ, ಇಲಾಖೆಯ ಹಲವು ಅಂಶಗಳು ಚರ್ಚೆಗೊಳಗಾಗಿದ್ದವು.
ಈಗಾಗಲೇ ಗುರುತಿಸಲಾಗಿರುವ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರ ಪೈಕಿ 3,65,614 ಪಡಿತರ ಚೀಟಿಗಳನ್ನು ರದ್ದು/ವರ್ಗ ಬದಲಾವಣೆ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಜೊತೆಗೆ ಪೌಷ್ಟಿಕ ಧಾನ್ಯ, ಅಗತ್ಯ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಒದಗಿಸುವ ಕುರಿತು ಪರಿಶೀಲನೆ ನಡೆಸಲಾಗಿದ್ದು, ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು.
ಳ ಮೀಸಲಾತಿಯಿಂದ ಯಾರಿಗೂ ಅನ್ಯಾಯವಾಗಿಲ್ಲ: ಒಳ ಮೀಸಲಾತಿ ಕುರಿತು ಮಾತನಾಡಿ, ಒಳ ಮೀಸಲಾತಿ ಜಾರಿಯಾದ ಮೇಲೆ ಮೊಟ್ಟ ಮೊದಲ ಸಭೆ ದಾವಣಗೆರೆಯಲ್ಲಿ ಮಾತನಾಡುತ್ತಿದ್ದೇವೆ. ಐತಿಹಾಸಿಕ ತೀರ್ಮಾನವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ನಾವೆಲ್ಲರೂ ಮಾಡಿದ್ದೇವೆ. 35 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. 101 ಜಾತಿಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದೆ. ಸಮುದಾಯಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು. ಒಳ ಮೀಸಲಾತಿಯಿಂದ ಯಾರಿಗೂ ಅನ್ಯಾಯವಾಗಿಲ್ಲ, ಆಗೋದು ಇಲ್ಲ. ಅಂತಹದ್ದೇನಾದರೂ ಇದ್ದರೆ, ಸರಿ ಮಾಡುವ ಕೆಲಸ ಮಾಡೋಣ ಎಂದರು.
ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿರುವ ಬಗ್ಗೆ ಮಾತನಾಡಿ, ಗಣೇಶ ಹಬ್ಬದ ವೇಳೆ ಒಂದಲ್ಲ ಒಂದು ದುರಂತ ಆಗುತ್ತದೆ. ಮೆರವಣಿಗೆ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಬೇಕಾಗುತ್ತದೆ. ದೇಶದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸದಿದ್ದರೆ ಸರಿ ಹೋಗುವುದಿಲ್ಲ ಎಂದು ಹೇಳಿದರು.