ರಾಜ್ಯದಲ್ಲಿ ಅನರ್ಹ ಬಿಪಿಎಲ್ ಪಡಿತರ ಕಾರ್ಡ್‌ಗಳ ರದ್ದತಿಗೆ ಮುಂದಾಗಿರುವ ಸರ್ಕಾರ, ಅನರ್ಹರಿಗೆ ಬಿಪಿಎಲ್ ಕಾರ್ಡ್ ಸಿಗದಂತೆ ಮತ್ತು ಅಕ್ರಮ ತಡೆಗೆ ಹೊಸ ತಂತ್ರಾಂಶ ಅಳವಡಿಕೆಗೆ ಮುಂದಾಗಿದೆ.
ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ವರದಿ ಮತ್ತು ಆಹಾರ ಇಲಾಖೆಯ ಕಾರ್ಯಾಚರಣೆಯಲ್ಲಿ 10.09 ಲಕ್ಷ ಬಿಪಿಎಲ್ ಕಾರ್ಡ್ ಎಂಬುದು ಪತ್ತೆಯಾಗಿವೆ. ಆಹಾರ ಇಲಾಖೆಯು ಜಿಲ್ಲಾವಾರು ಬಿಪಿಎಲ್ ಅನರ್ಹ ಕಾರ್ಡ್‌ಗಳ ಪಟ್ಟಿ ಮಾಡಿ ಅವನ್ನು ಜಿಲ್ಲೆಗಳ ಮುಖ್ಯಸ್ಥರಿಗೆ ಕಳುಹಿಸಿ, ಮರು ಪರಿಶೀಲನೆ ಕಾರ್ಯ ಕೈಗೊಂಡಿದೆ. ಈ ಮೂಲಕ ಅನರ್ಹರ ಪಟ್ಟಿ ಸಿದ್ಧಡಿಸಿ ಸರಕಾರದ ನಿರ್ದೇಶನದಂತೆ ಎಪಿಎಲ್‌ಗೆ ಪರಿವರ್ತಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಹಾರ ಇಲಾಖೆಯು ಹೊಂದಿರುವ ತಂತ್ರಾಂಶದ ಜತೆ ಸಾರಿಗೆ ಇಲಾಖೆಯ ಆರ್‌ಟಿಒ ತಂತ್ರಾಂಶ, ಕಂದಾಯ ಇಲಾಖೆ ಭೂಮಿ ತಂತ್ರಾಂಶ, ಆರೋಗ್ಯ ಇಲಾಖೆಯ ಇ-ಜನ್ಮ ಸಾಫ್ಟ್‌ವೇರ್, ಬ್ಯಾಂಕ್‌ಗಳ ತಂತ್ರಾಂಶ, ಎಚ್‌ಆರ್‌ಎಂಎಸ್ ತಂತ್ರಾಂಶಗಳನ್ನು ಅನರ್ಹರ ಪತ್ತೆಗೆ ಅಳವಡಿಸಿಕೊಳ್ಳಲಾಗಿದೆ. ಹೊಸ ಅರ್ಜಿ ಸಲ್ಲಿಕೆ ಸಂದರ್ಭದಲ್ಲಿಯೇ ಮಾನದಂಡ ಒಳಗೊಳ್ಳುವ ಅರ್ಜಿ ಮಾತ್ರ ಸ್ವೀಕೃತಿಯಾಗುವಂತೆ ನೋಡಿಕೊಳ್ಳಲು ನಾನಾ ಇಲಾಖೆಗಳ ತಂತ್ರಾಂಶ ಒಳಗೊಂಡು ಹೊಸದಾಗಿ ಪೂರ್ಣ ಪ್ರಮಾಣದ ಸಾಫ್ಟ್‌ವೇರ್ ಅಳವಡಿಸಿಕೊಳ್ಳಲು ಸರಕಾರ ನಿರ್ಧರಿಸಿದೆ.
ಅನರ್ಹರು ಬಿಪಿಎಲ್ ಪಡಿತರ ಚೀಟಿ ಪಡೆಯುವುದನ್ನು ತಪ್ಪಿಸಲು ಪಹಣಿ, ವಾಹನ ನೋಂದಣಿ, ನೌಕರರ ವಿವರವನ್ನು ಪಡಿತರ ಚೀಟಿ ದತ್ತಾಂಶಗಳ ಜತೆ ಬೆಸೆಯಬೇಕು ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗ-2 ಸರಕಾರಕ್ಕೆ ಶಿಫಾರಸು ಮಾಡಿದೆ.
ಕೃಷಿ ಭೂಮಿಯ ದತ್ತಾಂಶಗಳನ್ನು ಪಡಿತರ ಚೀಟಿ ದತ್ತಾಂಶಗಳ ಜತೆ ಸಮೀಕರಿಸಿದರೆ ಕೃಷಿ ಭೂಮಿ ಹೊಂದಿರುವವರ ವಿವರವನ್ನು ಪರಿಶೀಲಿಸಲು ಸುಲಭವಾಗುತ್ತದೆ. ಎಚ್‌ಆರ್‌ಎಂಎಸ್ ತಂತ್ರಾಂಶದಿಂದ ಸರಕಾರಿ ನೌಕರರ ಮಾಹಿತಿ, ವಾಹನ ನೋಂದಣಿ ದತ್ತಾಂಶ, ಆಸ್ತಿ ನೋಂದಣಿ ವಿವರವನ್ನು ಆಹಾರ ಇಲಾಖೆಯ ಪಡಿತರ ವ್ಯವಸ್ಥೆಗೆ ಜೋಡಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ. ಆದಾಯ ಪ್ರಮಾಣಪತ್ರ ವಿತರಣೆಗೆ ಏಕರೂಪದ ವಿಧಾನ ಅನುಸರಿಸುವಂತೆಯೂ ತಿಳಿಸಿದೆ.
ಶಿಫಾರಸು ಮಾಡಲಾಗಿರುವ ಅಂಶಗಳು
ಬಿಪಿಎಲ್ ಪಡಿತರದಾರರ ಮನೆಯ ವಾರ್ಷಿಕ ಆದಾಯ 1.2 ಲಕ್ಷ ರೂ.ಕ್ಕಿಂತ ಕಡಿಮೆ ಇರಬೇಕು. 3 ಹೆಕ್ಟೇರ್‌ಗಳಿಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರಬಾರದು. ನಗರದಲ್ಲಿ 1000 ಚ.ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಸ್ವಂತ ಮನೆ ಹೊಂದಿರಬಾರದು.
ಕುಟುಂಬವು ನಾಲ್ಕು ಚಕ್ರದ ವಾಹನ ಹೊಂದಿರಬಾರದು. ಜೀವನೋಪಾಯಕ್ಕಾಗಿ ಒಂದೇ ಆಟೋ ಹೊಂದಿರಬಹುದು. ಆದಾಯ ತೆರಿಗೆ ಪಾವತಿಸುತ್ತಿರಬಾರದು. ಮಾಸಿಕ ವಿದ್ಯುತ್ ಬಿಲ್ 450 ರೂ. ಮೀರಬಾರದು.
ಸರ್ಕಾರಿ ನೌಕರರು, ಆದಾಯ ತೆರಿಗೆದಾರರು, ಬಹುರಾಷ್ಟ್ರೀಯ ಸಂಸ್ಥೆಗಳ ಉದ್ಯೋಗಿಗಳು ಮತ್ತು ದೊಡ್ಡ ವ್ಯಾಪಾರ ಮಾಲೀಕರು, ಅಧಿಸೂಚಿತ ಗುತ್ತಿಗೆದಾರರು, ಎಪಿಎಂಸಿ ವ್ಯಾಪಾರಿಗಳು, ಕಮಿಷನ್ ಏಜೆಂಟ್‌ರು ಅರ್ಹರಲ್ಲ. ವೈದ್ಯರು, ವಕೀಲರು ಮತ್ತು ಲೆಕ್ಕಪರಿಶೋಧಕರು ಬಿಪಿಎಲ್ ಕಾರ್ಡ್‌ಗೆ ಅರ್ಹರಲ್ಲ.