Menu

ಪ್ರತಿದಿನ ಶಾಲೆಗೆ ಹೋಗಿ ಸರಿಯಾಗಿ ಓದು ಎಂದು ಬುದ್ಧಿ ಹೇಳಿದ್ದಕ್ಕೆ ಬಾಲಕ ಆತ್ಮಹತ್ಯೆ

ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಹೋಬಳಿಯಲ್ಲಿ “ಶಾಲೆ ತಪ್ಪಿಸಬೇಡ, ಪ್ರತಿದಿನ ಶಾಲೆಗೆ ಹೋಗು ಹೋಗಿ ಸರಿಯಾಗಿ ಓದು” ಎಂದು ತಂದೆ ಬುದ್ಧಿಮಾತು ಹೇಳಿದ್ದಕ್ಕೆ ನೊಂದುಕೊಂಡ ಎಂಟನೇ ತರಗತಿಯ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಚೆನ್ನಕಾಟಯ್ಯನ ಗುಡ್ಲು ನಿವಾಸಿ ಜಗದೀಶ್ (14) ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ. ಕೆಂಕೆರೆ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದನು. ಕೆಲವು ದಿನಗಳಿಂದ ಜಗದೀಶ್ ತನ್ನ ತಾಯಿಯ ತವರುಮನೆಗೆ ಹೋಗಿದ್ದನು. ಶನಿವಾರವಷ್ಟೇ ಊರಿಗೆ ಬಂದಿದ್ದ. ತಂದೆ ರಮೇಶ್ ಅವರು, ಇನ್ನು ಮುಂದೆ ಶಾಲೆ ತಪ್ಪಿಸಬೇಡ, ಪ್ರತಿದಿನ ಶಾಲೆಗೆ ಹೋಗು ಎಂದು ಬುದ್ಧಿವಾದ ಹೇಳಿ ಶಾಲೆಗೆ ಕಳುಹಿಸಿದ್ದರು.

ಶಾಲೆಗೆ ತೆರಳಿದ್ದ ಜಗದೀಶ್ ಶಾಲೆ ಮುಗಿದ ಬಳಿಕ ನ್ನ ಗೆಳೆಯನೊಂದಿಗೆ ಮನೆಗೆ ಬರುತ್ತಿದ್ದ. ಗೊಲ್ಲರಹಟ್ಟಿ ಸಮೀಪದ ಬಾವಿಯ ಬಳಿ ಬಂದಾಗ, ಜಗದೀಶ್ ತನ್ನ ಗೆಳೆಯನಿಗೆ ನೀನು ಮುಂದೆ ಹೋಗು, ನಾನು ಬರುತ್ತೇನೆ ಎಂದು ಹೇಳಿ ಆತನನ್ನು ಕಳುಹಿಸಿದ್ದಾನೆ. ಚಪ್ಪಲಿ ಮತ್ತು ಶಾಲಾ ಬ್ಯಾಗ್‌ ಬಾವಿಯ ಪಕ್ಕದಲ್ಲೇ ಇಟ್ಟು ಬಾವಿಗೆ ಹಾರಿದ್ದಾನೆ. ಶನಿವಾರ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಾಲಕ ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಡಿದ್ದು, ಬಾವಿಯ ಪಕ್ಕದಲ್ಲಿ ಬ್ಯಾಗ್ ಮತ್ತು ಚಪ್ಪಲಿ ಕಂಡು ವಿಷಯ ತಿಳಿದುಕೊಂಡಿದ್ದಾರೆ. ಹುಳಿಯಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಹೊರತೆಗೆದಿದ್ದಾರೆ. ಶಾಲೆಗೆ ಹೋಗುವಂತೆ ಹೇಳಿದ್ದಕ್ಕೇ ಬಾಲಕ ಇಷ್ಟು ದೊಡ್ಡ ನಿರ್ಧಾರ ಕೈಗೊಂಡಿದ್ದಾ ಅಥವಾ ಬೇರೆ ಏನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *