ಮಧ್ಯಮ ಕ್ರಮಾಂಕದಲ್ಲಿ ಸ್ಟೀವನ್ ಸ್ಮಿತ್ ಸಿಡಿಸಿದ ಸತತ ಎರಡನೇ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ವೈಫಲ್ಯದಿಂದ ಭಾರತ ಒತ್ತಡಕ್ಕೆ ಸಿಲುಕಿದೆ.
ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ 6 ವಿಕೆಟ್ ಗೆ 311 ರನ್ ನಿಂದ ಆಟ ಮುಂದುವರಿಸಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 424 ರನ್ ಗಳ ಬೃಹತ್ ಮೊತ್ತ ದಾಖಲಿಸಿ ಆಲೌಟಾಯಿತು. ನಂತರ ಆಡಲಿಳಿದ ಭಾರತ ತಂಡ ದಿನದಾಂತ್ಯಕ್ಕೆ 164 ರನ್ ಗೆ 5 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದೆ.
ಕೆಎಲ್ ರಾಹುಲ್ ಬದಲು ಅಗ್ರಕ್ರಮಾಂಕದಲ್ಲಿ ಆಡಲು ಇಳಿದ ನಾಯಕ ರೋಹಿತ್ ಶರ್ಮ (3) ವಿಫಲರಾದರೆ, ಮೂರನೇ ಕ್ರಮಾಂಕದಲ್ಲಿ ಆಡಿದ ಕೆಎಲ್ ರಾಹುಲ್ (24 ರನ್, 42 ಎಸೆತ, 3 ಬೌಂಡರಿ] ಎರಡನೇ ವಿಕೆಟ್ ಗೆ 43 ರನ್ ಪೇರಿಸಿ ಕುಸಿತ ತಡೆದರು.
ಕೆಎಲ್ ರಾಹುಲ್ ನಿರ್ಗಮನದ ನಂತರ ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಮೂರನೇ ವಿಕೆಟ್ ಗೆ 102 ರನ್ ಜೊತೆಯಾಟದಿಂದ ತಂಡವನ್ನು ಉತ್ತಮವಾಗಿ ಮುನ್ನಡೆಸಿದರು. ಆದರೆ ವಿಕೆಟ್ ನಡುವಿನ ಓಟದಲ್ಲಿ ಗೊಂದಲ ಮಾಡಿಕೊಂಡ ಜೈಸ್ವಾಲ್ ರನೌಟ್ ಆದರು.
ಜೈಸ್ವಾಲ್ ಔಟಾಗುವ ಮುನ್ನ 118 ಎಸೆತಗಳಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 82 ರನ್ ಗಳಿಸಿದರು. ಕೊಹ್ಲಿ 86 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 36 ರನ್ ಗಳಿಸಿ ಜೈಸ್ವಾಲ್ ಬೆನ್ನಲ್ಲೇ ಪೆವಿಲಿಯನ್ ಸೇರಿಕೊಂಡರು.
ಈ ಹಂತದಲ್ಲಿ ಭಾರತ ಆಕ್ಷ್ ದೀಪ್ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ವಿಕೆಟ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಸ್ಟೀವನ್ ಸ್ಮಿತ್ ಶತಕ ಹಾಗೂ ನಾಯಕ ಪ್ಯಾಟ್ ಕಮಿನ್ಸ್ ಅವರ ಜೊತೆಯಾಟದಿಂದ ಬೃಹತ್ ಮೊತ್ತ ದಾಖಲಿಸಿತು. ಸ್ಮಿತ್ 197 ಎಸೆತಗಳಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 140 ರನ್ ಚಚ್ಚಿದರೆ, ಕಮಿನ್ಸ್ 63 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 49 ರನ್ ಬಾರಿಸಿ 1 ರನ್ ನಿಂದ ಅರ್ಧಶತಕದಿಂದ ವಂಚಿತರಾದರು. ಭಾರತದ ಪರ ಜಸ್ ಪ್ರೀತ್ ಬುಮ್ರಾ 4 ವಿಕೆಟ್ ಪಡದರೆ, ರವೀಂದ್ರ ಜಡೇಜಾ 3 ವಿಕೆಟ್ ಗಳಿಸಿದರು.