ಕೇಂದ್ರ ಸಚಿವ ನಿತಿನ್ ಗಡ್ಕರಿ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನೊಬ್ಬನನ್ನು ಬಂಧಿಸಲಾಗಿದೆ. ಗಡ್ಕರಿಯವರ ನಾಗ್ಪುರ ನಿವಾಸಕ್ಕೆ ಭಾನುವಾರ ಬೆಳಗ್ಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು, ವಾರ್ಧಾ ರಸ್ತೆಯಲ್ಲಿರುವ ಅವರ ಮನೆಯನ್ನು ಸ್ಫೋಟಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಪ್ರತಾಪ್ ನಗರ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಕೆಲವೇ ಗಂಟೆಗಳಲ್ಲಿ ಶಂಕಿತ ಉಮೇಶ್ ವಿಷ್ಣು ರಾವತ್ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಲ್‌ನ ತುಳಸಿ ಬಾಗ್ ರಸ್ತೆಯ ನಿವಾಸಿಯಾದ ರಾವತ್, ಮೆಡಿಕಲ್ ಚೌಕ್ ಬಳಿಯ ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆತ ಮೊಬೈಲ್ ಫೋನ್‌ನಿಂದ ಕರೆ ಮಾಡಿ, ಗಡ್ಕರಿ ಅವರ ನಿವಾಸವನ್ನು 10 ನಿಮಿಷಗಳಲ್ಲಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಪೊಲೀಸರು ಪತ್ತೆ ಹಚ್ಚಿ ನಾಗ್ಪುರದ ಬಿಮಾ ದವಾಖಾನಾ ಬಳಿ ಬಂಧಿಸಿದ್ದಾರೆ.
ಅಧಿಕಾರಿಗಳು ಗಡ್ಕರಿ ನಿವಾಸದ ಸುತ್ತ ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ ಮತ್ತು ಬೆದರಿಕೆಯ ಹಿಂದಿನ ಉದ್ದೇಶದ ಕುರಿತು ಹೆಚ್ಚಿನ ವಿವರಗಳನ್ನು ಪತ್ತೆ ಹಚ್ಚಲು ಕೆಲಸ ಮಾಡುತ್ತಿದ್ದಾರೆ.
ಸಚಿವ ಗಡ್ಕರಿ ನಿವಾಸಕ್ಕೆ ಬಾಂಬ್ ಬೆದರಿಕೆ: ಶಂಕಿತನ ಬಂಧನ
