Menu

ರಾಜ್ಯದ ಕೋರ್ಟ್‌ಗಳಿಗೆ ಬಾಂಬ್‌ ಬೆದರಿಕೆ

ರಾಜ್ಯದಲ್ಲಿ ಹಲವು ನ್ಯಾಯಾಲಯಗಳಿಗೆ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ಧಾರವಾಡ, ದಾವಣಗೆರೆ ಹಾಗೂ ಕೊಡಗು ಜಿಲ್ಲೆಗಳ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದು, ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳಗಳು ಕ್ರಮ ಕೈಗೊಂಡಿವೆ. ಈ ಹಿಂದೆ ಕೂಡ ರಾಜ್ಯದ ನ್ಯಾಯಾಲಯಗಳಿಗೆ ಹುಸಿ ಬೆದರಿಕೆ ಕರೆ ಬಂದಿತ್ತು.

ಧಾರವಾಡದಲ್ಲಿರುವ ಹೈಕೋರ್ಟ್‌ಗೆ ಬಾಂಬ್ ಇಡಲಾಗಿದೆ ಎಂಬ ಇ-ಮೇಲ್ ಸಂದೇಶ ಬಂದಿದ್ದು, ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ವಕೀಲರು, ನ್ಯಾಯಾಲಯದ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಸಂಪೂರ್ಣವಾಗಿ ಕೋರ್ಟ್ ಆವರಣ ದಿಂದ ಹೊರಗೆ ಕಳುಹಿಸಿದರು. ಇ-ಮೇಲ್‌ ಬೆದರಿಕೆಯಲ್ಲಿ ಮಧ್ಯಾಹ್ನ 1:15ಕ್ಕೆ ಸ್ಫೋಟ ಸಂಭವಿಸುವುದಾಗಿ ಬರೆಯಲಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಭದ್ರತೆ ಒದಗಿಸಿದರು. ಕಳೆದ ತಿಂಗಳು ಕೂಡ ಇದೇ ರೀತಿ ಬಾಂಬ್‌ ಬೆದರಿಕೆ ಬಂದಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೋರ್ಟ್ ಕಟ್ಟಡದ ಒಳಗೆ ಶೋಧ ಕಾರ್ಯ ನಡೆಸಿವೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕಳಿಸಲಾಗಿದೆ. ಇ-ಮೇಲ್‌ನಲ್ಲಿ ಬೇರೆ ರಾಜ್ಯಗಳ ಉಲ್ಲೇಖಗಳೂ ಇದ್ದು, ಎಲ್ಲಾ ಆಯಾಮಗಳಿಂದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಜಿಲ್ಲಾ ನ್ಯಾಯಾಧೀಶರ ಅಧಿಕೃತ ಇ-ಮೇಲ್‌ಗೆ ಸಂದೇಶ ಬಂದಿದ್ದು, ಮಧ್ಯಾಹ್ನ 12.30ಕ್ಕೆ ಆರ್‌ಡಿಎಕ್ಸ್ ಬಾಂಬ್ ಸ್ಫೋಟವಾಗಲಿದೆ ಎಂದು ಅದರಲ್ಲಿ ತಿಳಿಸಲಾಗಿದೆ. ತಕ್ಷಣ ಕೋರ್ಟ್ ಕಲಾಪವನ್ನು ಸ್ಥಗಿತಗೊಳಿಸಿ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದಿಂದ ಸಂಪೂರ್ಣ ಕಟ್ಟಡವನ್ನು ಪರಿಶೀಲಿಸಿತು. ವಕೀಲರು, ನ್ಯಾಯಾಲಯದ ಸಿಬ್ಬಂದಿ ಮತ್ತು ಕಕ್ಷಿದಾರರನ್ನು ಕೋರ್ಟ್ ಆವರಣದಿಂದ ಹೊರಗೆ ಕಳುಹಿಸಲಾಗಿದೆ.

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಇರುವ ಜಿಲ್ಲಾ ನ್ಯಾಯಾಲಯಕ್ಕೂ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಬಂದಿದೆ. ಅಧಿಕಾರಿಗಳು ಕಚೇರಿಗೆ ಬಂದಾಗ ಸಂದೇಶ ಗಮನಕ್ಕೆ ಬಂದಿದ್ದು, ತಕ್ಷಣವೇ ನ್ಯಾಯಾಧೀಶರು, ವಕೀಲರು ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಎಲ್ಲರೂ ಕೋರ್ಟ್‌ ಆವರಣದಿಂದ ಹೊರ ಹೋದರು. ಬಾಂಬ್ ನಿಷ್ಕ್ರಿಯ ದಳ ಹಾಗೂ ಡಾಗ್ ಸ್ಕ್ವಾಡ್ ಸಂಪೂರ್ಣ ಸಂಕೀರ್ಣವನ್ನು ಶೋಧಿಸಿದರು. ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ, ಶೋಧ ಕಾರ್ಯ ಮುಂದುವರಿ ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಬರ್ ಕ್ರೈಂ ವಿಭಾಗದ ಸಹಾಯದಿಂದ ಪೊಲೀಸರು ಈ ಇ-ಮೇಲ್‌ಗಳ ಮೂಲ ಪತ್ತೆ ಹಚ್ಚುವ ಕಾರ್ಯ ಕೈಗೊಂಡಿದ್ದಾರೆ.

ಹಾವೇರಿಯ ಹಳೆಯ ಪಿ.ಬಿ. ರಸ್ತೆಯಲ್ಲಿ ಇರುವ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ  ಬಂದಿದೆ. ಫ್ಯಾಕ್ಸ್‌  ಮೂಲಕ ಬೆದರಿಕೆ ಬಂದ  ಬಳಿಕ ಎಲ್ಲಾ ವಕೀಲರು ಮತ್ತು ನ್ಯಾಯಾಲಯದ ವಿವಿಧ ಸಿಬ್ಬಂದಿ ಹಾಗೂ ಕೋರ್ಟ್ ಕೆಲಸಕ್ಕೆಂದು ಬಂದಿದ್ದ ಸಾರ್ವಜನಿಕರನ್ನು  ಹೊರಕಳಿಸಲಾಯಿತು.  ಕೋರ್ಟ್ ಆವರಣಕ್ಕೆ ಧಾವಿಸಿದ ಪೊಲೀಸರು ತಪಾಸಣೆ ನಡೆಸಿದರು. ಬೆದರಿಕೆಯಿಂದಾಗಿ ಕೋರ್ಟ್ ಕಲಾಪಗಳು ಮೊಟಕುಗೊಳಿಸಲಾಗಿದೆ.

Related Posts

Leave a Reply

Your email address will not be published. Required fields are marked *