ಗದಗ ಜಿಲ್ಲಾಧಿಕಾರಿ ಕಚೇರಿ ಹಾಗೂ ಮಂಗಳೂರು ಆರ್ ಟಿಓ ಕಚೇರಿಗಳಿಗೆ ಬಾಂಬ್ ಹಾಕುವುದಾಗಿ ಬೆದರಿಕೆ ಕರೆಗಳು ಬಂದಿವೆ.
ಗದಗ ಜಿಲ್ಲಾಡಳಿತ ಭವನದ ಮೇಲೆ 5 ಬಾಂಬ್ ಎಸೆಯುವುದಾಗಿ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದು, ಕೆಲಕಾಲ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಗದಗದಲ್ಲಿ ಸೋಮವಾರ ನಡೆದಿದೆ.
ಜಿಲ್ಲಾಧಿಕಾರಿಯ ಇ-ಮೇಲ್ ಸಂದೇಶದಲ್ಲಿ ಅರ್ನಾ ಅಶ್ವಿನ್ ಶೇಖರ್ ಎಂಬ ಹೆಸರಿನಿಂದ ಇ-ಮೇಲ್ ಬಂದಿದೆ. ಗದಗ ಡಿಸಿ ಆಫೀಸ್‌ನ ಪ್ರಮುಖ 5 ಸ್ಥಳಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಮಾಹಿತಿ ಇತ್ತು. ಇಂದು ಬೆಳಗ್ಗೆ ಅಧಿಕಾರಿಗಳ ಇ-ಮೇಲ್‌ಗೆ ಹುಸಿ ಬಾಂಬ್ ಸಂದೇಶ ಬಂದಿತ್ತು. ಇ-ಮೇಲ್ ಮೆಸೇಜ್‌ನಿಂದಾಗಿ ಕೆಲಕಾಲ ಜಿಲ್ಲಾಡಳಿತ ಭವನದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಂಗಾಲಾಗಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಶ್ವಾನದಳ, ಬಾಂಬ್ ಸ್ಕ್ಯಾಡ್ ಹಾಗೂ ಪೊಲೀಸರು ದೌಡಾಯಿಸಿ ಗದಗ ಜಿಲ್ಲಾಡಳಿತ ಭವನದಲ್ಲಿ ಶೋಧ ಕಾರ್ಯ ಕೈಗೊಂಡರು. ಡಿಸಿ ಚೇಂಬರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸುಮಾರು ಎರಡು ಗಂಟೆಗಳ ಕಾಲ ತಪಾಸಣೆ ನಡೆಸಲಾಯಿತು. ಆದರೆ ಯಾವುದೇ ಸ್ಫೋಟಕ ವಸ್ತುಗಳು ಎಲ್ಲೂ ಪತ್ತೆಯಾಗಲಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆಯ ಸಂದೇಶ ಎಂದು ಅನುಮಾನ ವ್ಯಕ್ತವಾಗಿದೆ. ತಮಿಳುನಾಡು ಚುನಾವಣೆ ಸಮಯದಲ್ಲಿ ಗಮನ ಬೇರೆಡೆ ಸೆಳೆಯುವ ಹಿನ್ನಲೆಯೆ ಇಂತಹ ಕಾರ್ಯಕ್ಕೆ ಬೆದರಿಕೆದಾರರು ಯತ್ನಿಸಿರಬಹುದು ಎನ್ನಲಾಗುತ್ತಿದೆ.
ತಮಿಳುನಾಡಿನ ಎಲ್‌ಟಿಟಿಇ ಕಾರ್ಯಕರ್ತರೊಂದಿಗೆ ಸೇರಿ ಪಾಕಿಸ್ತಾನ ಐಎಸ್‌ಐ ಸಂಸ್ಥೆ ಸ್ಫೋಟಿಸಲು ಸಂಚು ಎಂದು ಸಹ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಬಾಂಬ್ ಬೆದರಿಕೆ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಪಿಐಗಳಾದ ಎಲ್ ಕೆ ಜೂಲಕಟ್ಟಿ, ಸಿದ್ದರಾಮೇಶ ಗಡಾದ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಮಂಗಳೂರಿನ ಆರ್‌ಟಿಓ ಕಚೇರಿಗೂ ಬೆದರಿಕೆ:
ಇನ್ನು ಮಂಗಳೂರಿನ ಆರ್‌ಟಿಓ ಕಚೇರಿಗೂ ಬಾಂಬ್ ಬೆದರಿಕೆ ಬಂದಿದೆ. ಕಚೇರಿಯ ಅಧಿಕೃತ ಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶವನ್ನು ರವಾನಿಸಲಾಗಿದೆ. ಮಂಗಳೂರಿನ ನೆಹರೂ ಮೈದಾನ ಬಳಿಯಿರುವ ಆರ್‌ಟಿಓ ಕಚೇರಿಯ 5 ಕಡೆ ಬಾಂಬ್ ಸ್ಫೋಟಿಸುವುದಾಗಿ ಕಿಡಿಕೇಡಿಗಳು ಸಂದೇಶ ರವಾನಿಸಿದ್ದಾರೆ. ಸದ್ಯ ಆರ್‌ಟಿಒ ಕಚೇರಿಯಲ್ಲಿ ಮಂಗಳೂರು ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಇಡೀ ಕಟ್ಟಡವನ್ನು ತಪಾಸಣೆ ಮಾಡಲಾಗಿದೆ.


