ಸಿಎಂ, ಡಿಸಿಎಂ ಮನೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಸ್ ಐಟಿ ತನಿಖೆಗೆ ಆದೇಶಿಸಿದೆ.
ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಕೆಲ ಶಾಲೆಗಳು, ಸರ್ಕಾರಿ ಕಚೇರಿ ಹಾಗೂ ದೇವಸ್ಥಾನಗಳಿಗೆ ಬಾಂಬ್ ಬೆದರಿಕೆ ಬರುತ್ತಿವೆ.
ಬೆಂಗಳೂರಿನಲ್ಲೇ ಇಂತಹ 34 ಪ್ರಕರಣಗಳು ದಾಖಲಾಗಿವೆ. ಮುಂಬೈನಲ್ಲಿ 27, ಚೆನ್ನೈ 22 ಪ್ರಕರಣಗಳು ದಾಖಲಾಗಿವೆ. ಬಾಂಬ್ ಬೆದರಿಕೆಗಳನ್ನು ತಪ್ಪಿಸಲು ಹಾಗೂ ಹುಸಿ ಬೆದರಿಕೆ ಹಾಕುವ ಕಿಡಿಗೇಡಿಗಳ ಪತ್ತೆಗೆ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ತನಿಖಾ ತಂಡ ರಚನೆ ಮಾಡಿ ಆದೇಶಿಸಿದ್ದಾರೆ.
ಶನಿವಾರ ಬೆಳಗಿನ ಜಾವ 4:20ರ ಸುಮಾರಿಗೆ, ಆರ್ನಾ ಅಶ್ವಿನ್ ಶೇಖರ್ (aarna.ashwinshekher@outlook.com) ಮೇಲ್ ಐಡಿಯಿಂದ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಇಮೇಲ್ ಐಡಿ (cm.kar@nic.in) ಮತ್ತು ಡಿಸಿಎಂ ಅವರ ವೈಯಕ್ತಿಕ ಇಮೇಲ್ ಐಡಿ dkshivakumar1@gmail.com ಗೆ ಇಮೇಲ್ ಬೆದರಿಕೆ ಸಂದೇಶ ಬಂದಿತ್ತು.
ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ಸಿಎಂ ಮತ್ತು ಡಿಸಿಎಂ ಅವರ ನಿವಾಸಗಳನ್ನು ಸಂಪೂರ್ಣ ಶೋಧ ನಡೆಸಲಾಗಿತ್ತು. ಬಳಿಕ ಹುಸಿ ಬಾಂಬ್ ಬೆದರಿಕೆ ಅನ್ನೋದು ಗೊತ್ತಾಯ್ತು. ಬಳಿಕ ಅರ್ನಾ ಅಶ್ವಿನ್ ಶೇಖರ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬೆನ್ನಲ್ಲೇ ಎಸ್ಐಟಿ ರಚಿಸಲಾಗಿದೆ.
ಬಂಗಾಳದಲ್ಲಿ ಓರ್ವನ ಬಂಧನ
ಕಳೆದ ವರ್ಷ ಅಕ್ಟೋಬರ್ 4ರಂದು ಬಸವನಗುಡಿಯ ಬಿಐಟಿ ಕಾಲೇಜಿಗೆ ಇ-ಮೇಲ್ ಮೂಲಕ ಆರೋಪಿಯು ಬಾಂಬ್ ಬೆದರಿಕೆ ಹಾಕಿದ್ದ. ಕಾಲೇಜು ಆವರಣದಲ್ಲೇ ಹೈಡ್ರೋಜನ್ ಸುಧಾರಿತ ಐಇಡಿ (IED) ಇಟ್ಟಿದ್ದು, ಅದನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ವಿವಿ ಪುರಂ ಪೊಲೀಸರು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿ ಆರೋಪಿಯನ್ನ ಬಂಧಿಸಿದ್ದರು.
ಆರೋಪಿಯಿಂದ ಲ್ಯಾಪ್ಟಾಪ್, ಮೊಬೈಲ್ ಫೋನ್ಗಳನ್ನ ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ಆರೋಪಿ ಇದೇ ರೀತಿ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅನ್ನೋದು ಗೊತ್ತಾಗಿತ್ತು.
ಇದಕ್ಕೂ ಮುನ್ನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಡಿಕೆಶಿ ಮನೆ ಎದುರಿನ ಶಾಲೆಗೂ ಬಾಂಬ್ ಬೆದರಿಕೆ ಬಂದಿತ್ತು.